ಬೂದಗುಂಪಾ ಕ್ರಾಸ್ ನಿಂದ ಬಳ್ಳಾರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಮನವಿ.
ಗಂಗಾವತಿ: ಗಂಗಾವತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ತಾಲೂಕಿನ ಬೂದಗುಂಪಾ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ: N.H.50) ಯಿಂದ ಕಂಪ್ಲಿ-ಕುರಗೋಡು ಮಾರ್ಗವಾಗಿ ಕೋಳೂರ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ:N.H.50A ಕ್ಕೆ ಅಥವಾ ಕಂಪ್ಲಿ-ಕುಡುತಿನಿ ಮಾರ್ಗವಾಗಿ ಕುಡಿತಿನಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿಗೆ (ಸಂಖ್ಯೆ:67) ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ , ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಸಚಿವರಿಗೆ ಪತ್ರ ಬರೆಯುವ ಮೂಲಕ ವಿನಂತಿಸಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಯಾವುದೇ ರಾಷ್ಟ್ರೀಯ ಹೆದ್ದಾರಿಗಳಿಲ್ಲ.ಗಂಗಾವತಿ ತಾಲೂಕು ಮೂಲಕವಾಗಿ ನಿರ್ಮಿಸಬೇಕಾಗಿದ್ದ ಕಾರವಾರ-ಬಳ್ಳಾರಿ ಹೆದ್ದಾರಿಯನ್ನು ಹೊಸಪೇಟೆ ಮೂಲಕ (ವಿಜಯ ನಗರ ಜಿಲ್ಲೆ) ಹಾದು ಹೋಗುವಂತೆ ನಿರ್ಮಿಸಲಾಯಿತು
ರಾಯಚೂರು ಜಿಲ್ಲೆಯ ಲಿಂಗ್ಸೂರ ಮೂಲಕ ಕೊಪ್ಪಳ ಜಿಲ್ಲೆಯ ತಾವರಗೇರಿ-ಕನಕಗಿರಿ-ಗಂಗಾವತಿ ಮತ್ತು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಿಂದ ಬಳ್ಳಾರಿ ಮೂಲಕ ಹಾದು ಹೋಗಬೇಕಾಗಿದ್ದ “ಬೀದರ- ಶ್ರೀರಂಗಪಟ್ಟಣ” ಹೆದ್ದಾರಿಯನ್ನು ಲಿಂಗ್ಸೂರ-ಮಸ್ಕಿ-ಸಿಂಧನೂರು-ಸಿರುಗುಪ್ಪ-ಬಳ್ಳಾರಿ ಮೂಲಕ ಹಾದು ಹೋಗುವಂತೆ ನಿರ್ಮಿಸಲಾಯಿತು. ಹೀಗಾಗಿ ಗಂಗಾವತಿ ಮತ್ತು ಕಂಪ್ಲಿ ತಾಲೂಕಿನಲ್ಲಿ ಯಾವುದೇ ರಾಷ್ಟ್ರೀಯ ಹೆದ್ದಾರಿಗಳಿಲ್ಲ.
ಆದ್ದರಿಂದ ಕೊಪ್ಪಳ ತಾಲೂಕಿನ ಬೂದಗುಂಪಾ ಕ್ರಾಸ್ ನಿಂದ ಗಂಗಾವತಿ-ಕಂಪ್ಲಿ-ಕುಡತಿನಿ ಕ್ರಾಸ್ ಅಥವಾ ಗಂಗಾವತಿ-ಕಂಪ್ಲಿ-ಕುರಗೋಡು-ಕೋಳೂರ ಕ್ರಾಸ್ ಮೂಲಕ ಬಳ್ಳಾರಿಗೆ ತಲುಪುವಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು,ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರಿಗೆ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಸಂಪೂರ್ಣವಾಗಿ ನೀರಾವರಿ ಪ್ರದೇಶ ಮತ್ತು ಅರೆ ನೀರಾವರಿ ಪ್ರದೇಶ ಹೊಂದಿರುವ ಈ ಭಾಗದಲ್ಲಿ ಬೆಳೆಯುವ ಭತ್ತ, ದಾಳಿಂಬೆ,ದ್ರಾಕ್ಷಿ, ಬಾಳೆ ಹಣ್ಣು, ಮಾವಿನ ಹಣ್ಣು ಇವುಗಳನ್ನು ತ್ವರಿತವಾಗಿ ಸಾಗಿಸಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅವಶ್ಯವಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಮುಗಿದಿದ್ದರೂ ಗಂಗಾವತಿ ನಗರದಿಂದ ಬಳ್ಳಾರಿ ನಗರಕ್ಕೆ ಒಂದು ಒಳ್ಳೆಯ ರಸ್ತೆ ನಿರ್ಮಾಣವಾಗಿಲ್ಲ.ಆದ್ದರಿಂದ ಬೂದಗುಂಪಾ ಕ್ರಾಸ್ ಅಥವಾ ಕೋಳೂರ ಕ್ರಾಸ್ ಅಥವಾ ಕುಡಿತಿನಿಯವರೆಗೂ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಬೇಕೆಂದು ಸಂಸ್ಥೆಯಿಂದ ಬರೆದ ಪತ್ರದಲ್ಲಿ ಕೋರಲಾಗಿದೆ.