ಗಂಗಾವತಿ-ದರೋಜಿ ರೇಲ್ವೆ ಲೈನ್, ಡಿ.ಪಿ.ಆರ್.ಸಲ್ಲಿಕೆ
ಗಂಗಾವತಿ: ನಗರದ ರೇಲ್ವೆ ಸ್ಟೇಷನ್ ನಿಂದ ದರೋಜಿ ರೇಲ್ವೆ ಸ್ಟೇಷನ್ ವರೆಗೆ ನೂತನ ಬ್ರಾಡ್ ಗೇಜ್ ರೇಲ್ವೆ ಲೈನ್ ನಿರ್ಮಾಣಕ್ಕಾಗಿ ಅಂದಾಜು 900 ಕೋಟಿ ರೂಪಾಯಿಗಳ ಡಿ.ಪಿ.ಆರ್.ನ್ನು ರೇಲ್ವೆ ಬೋರ್ಡ್ ಗೆ ದಿನಾಂಕ:23-12-2023 ರಂದು ರವಾನಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಈ ವಿಷಯವನ್ನು ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕರಾದ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೀವ್ರಗತಿಯಲ್ಲಿ ಈ ರೇಲ್ವೆ ಲೈನ್ ನ ಸರ್ವೇ ಕಾರ್ಯ ಮುಕ್ತಾಯವಾಗಲು ಸಂಸದ ಸಂಗಣ್ಣ ಕರಡಿಯವರ ಕಾಳಜಿ ಕಾರಣವಾಗಿದ್ದು,ಅಂದಾಜು ವೆಚ್ಚ ರೂ.900 ಕೋಟಿಗಳನ್ನು ಕೇಂದ್ರ ಸರಕಾರದಿಂದ ಮಂಜೂರು ಮಾಡಿಸಲು ಸಂಗಣ್ಣನವರು ತೀವ್ರ ತರವಾದ ಪ್ರಯತ್ನ ಮುಂದುವರಿಸುತ್ತಾರೆ ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರೂ ಆದ ಹೇರೂರ ಆಶಯ ವ್ಯಕ್ತ ಪಡಿಸಿದ್ದಾರೆ.
ಗಂಗಾವತಿ-ದರೋಜಿ ನೂತನ ಬ್ರಾಡ್ ಗೇಜ್ ರೇಲ್ವೆ ಲೈನ್ ನಿರ್ಮಾಣವಾದಲ್ಲಿ ಗಂಗಾವತಿ-ಗಿಣಿಗೇರಾ-ಹೊಸಪೇಟೆ ಮಾರ್ಗವಾಗಿ ಬಳ್ಳಾರಿಯನ್ನು ತಲುಪಬೇಕಾದ ರೇಲ್ವೇಗಳು ನೇರವಾಗಿ ಬಳ್ಳಾರಿಯನ್ನು ತಲುಪುತ್ತವೆ.ಇದರಿಂದ ಸಮಯ ಮತ್ತು ಇಂಧನದ ವ್ಯಚ್ಚ ಉಳಿಯಲಿದೆ.ಇದೇ ರೀತಿ ಬಾಡಿಗೆ ಮತ್ತು ಪ್ರಯಾಣಿಕರ ಟಿಕೆಟ್ ಹಣದಲ್ಲಿ ಉಳಿತಾಯವಾಗಲಿದೆ.
ಲೋಕಸಭಾ ಚುನಾವಣೆಯ ಪೂರ್ವದಲ್ಲಿಯೇ ಸಂಸದ ಕರಡಿಯವರು ನೂತನ ರೇಲ್ವೆ ಲೈನ್ ನಿರ್ಮಾಣಕ್ಕಾಗಿ ಅನುದಾನ ಒದಗಿಸುತ್ತಾರೆ ಎಂಬ ವಿಶ್ವಾಸವನ್ನು ಗಂಗಾವತಿ ಭಾಗದ ಜನರು ಹೊಂದಿದ್ದಾರೆ.