ಮಕ್ಕಳ ಕನ್ನಡ ೨ ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಅಭಿಷೇಕ ಸ್ವಾಮಿ ಹೇರೂರ ಅವರ ಅಧ್ಯಕ್ಷೀಯ ನುಡಿಗಳು.
ಗಂಗಾವತಿ ನಗರದ ನಮ್ಮ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಎರಡನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಸ್ವಾಗತಾರ್ಹ.ಈ ಸಮ್ಮೇಳನದ ಸರ್ವಾಧ್ಯಕ್ಷನಾಗಿ ನಾನು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.ಅದಕ್ಕಾಗಿ ಶಾಲಾ ವೃಂದಕ್ಕೆ ನಾನು ಚಿರಋಣಿಯಾಗಿದ್ದೇನೆ.
ಇಂಗೀಷ್ ಭಾಷೆಯ ದಾಸ್ಯದಲ್ಲಿ ಬೀಳುವ ಮೂಲಕ ಇಂದಿನ ವಿಧ್ಯಾರ್ಥಿಗಳು ಮತ್ತು ಪಾಲಕರು ಕನ್ನಡ ಭಾಷೆಯ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಇದು ಕನ್ನಡ ಭಾಷೆಯ ಮೇಲಾಗುತ್ತಿರುವ ಕೆಟ್ಟ ಪರಿಣಾಮ. ಕನ್ನಡ ಭಾಷೆಯನ್ನು ಬಳಸುವುದು,ಬೆಳೆಸುವುದು ಕನ್ನಡಿಗರಾದ ನಮ್ಮ ಆಧ್ಯ ಕರ್ತವ್ಯ.ಇದನ್ನು ಎಂದೂ ಮರೆಯಬಾರದು.
ಪರಸ್ಪರ ಕನ್ನಡ ಗೊತ್ತಿದ್ದರೂ ಇಂಗ್ಲೀಷ್ ಭಾಷೆ ಬಳಸಿ ಮಾತನಾಡುವುದು ಖೇದಕರ.ಕನ್ನಡ ಬಾಷೆ ಗೊತ್ತಿಲ್ಲದವರೊಡನೆ,ಸಂಪರ್ಕ ಸಾಧಿಸಲು ಇಂಗ್ಲೀಷ್ ಬಳಸಿದರೆ ತಪ್ಪಿಲ್ಲ.ಆದರೆ ಕನ್ನಡ ಬಲ್ಲವರೊಡನೆ ಬೇರೆ ಭಾಷೆಯಲ್ಲಿ ಮಾತನಾಡದೆ, ಕನ್ನಡ ಮಾತನಾಡುವುದು ಶ್ರೇಷ್ಠವಾದ ಕೆಲಸ.
ಕನ್ನಡದಲ್ಲಿ ಇಂಗ್ಲೀಷ್, ಹಿಂದಿ, ಭಾಷೆ ಸೇರಿಸಿ ಮಾತನಾಡುವುದು ಇದೀಗ ಹೆಚ್ಚಾಗಿದೆ.ಈ ಅಭ್ಯಾಸವನ್ನು ಕನ್ನಡಿಗರಾದ ನಾವು ಬಿಡಬೇಕು.ನಾವೇ ನಮ್ಮ ಕನ್ನಡ ಭಾಷೆಗೆ ಆಪತ್ತು ತರಬಾರದು.ನಗರ, ಮಹಾನಗರಗಳಲ್ಲಿ ಕನ್ನಡದ ಜೊತೆಗೆ ಇತರ ಭಾಷೆಗಳನ್ನು ಸೇರಿಸಿ ಮಾತನಾಡುವುದು ಈಗ ಸಹಜವಾಗಿ ಬಿಟ್ಟಿದೆ.ಮುಂದಿನ ದಿನಗಳಲ್ಲಿ ಈ ಪಿಡುಗು ಹಳ್ಳಿಗೂ ಬಂದರೂ ಆಶ್ಚರ್ಯವಿಲ್ಲ.
ಅದಕ್ಕಾಗಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹುಟ್ಟಿಸುವ ಇಂತಹ ಸಮ್ಮೇಳನಗಳು ನಡೆಯಬೇಕು. ಆಗ ಮಾತ್ರ ಕನ್ನಡದ ಮೇಲಿನ ಅಭಿಮಾನ ಕನ್ನಡಿಗರಲ್ಲಿ ಮಾತ್ರವಲ್ಲ ಇತರ ಭಾಷಿಕರಲ್ಲಿಯೂ ಬರಲು ಸಾಧ್ಯ. ಕನ್ನಡ ನಾಡಿನಲ್ಲಿ ಬದುಕಲು ಬಂದವರು ಕನ್ನಡ ಕಲಿಯಲೇ ಬೇಕು.ಅವರು ಕನ್ನಡ ಕಲಿಯುವ ವಾತಾವರಣ ಸೃಷ್ಟಿಯಾಗಬೇಕು.ಅವರು ಕಲಿಯುವ ಪ್ರಯತ್ನದಲ್ಲಿರುವಾಗಲೇ ನಾವೇ ಅವರ ಭಾಷೆಯಲ್ಲಿ ಮಾತನಾಡಿ,ಕನ್ನಡ ಕಲಿಯುವ ಅವರ ಉತ್ಸಾಹವನ್ನು ಕಡಿಮೆ ಮಾಡುತ್ತಿದ್ದೇವೆ.ಇದು ಕನ್ನಡಿಗರ ಉದಾರತನ ವಾಗುತ್ತದೆ.ಇದರ ದುರ್ಲಾಭವಾಗಬಾರದು.
ಕನ್ನಡ ಭಾಷೆ,ನೆಲ,ಜಲ ಇವುಗಳ ಬಗ್ಗೆ ನಿರ್ಲಕ್ಷ್ಯ ತೋರಿಸುವುದು ಸಾಧ್ಯವಿಲ್ಲ.ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡ ಅಭ್ಯಾಸ ಮಾಡುವುದು ಕಷ್ಟಕರ ಎಂದು ಇಂದಿನ ವಿಧ್ಯಾರ್ಥಿಗಳು ಅಭಿಪ್ರಾಯ ಪಡುತ್ತಿದ್ದಾರೆ.ಕನ್ನಡವನ್ನು ಮೊದಲು ಸರಿಯಾಗಿ ಕಲಿತು,ಇತರ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ ಕನ್ನಡಕ್ಕೆ ಮೊದಲ ಪ್ರಾಧನ್ಯತೆ ಇರಬೇಕು.
ಪಾಲಕರೂ ಸಹ ಮಕ್ಕಳಿಗೆ ಒತ್ತಾಯ ಪೂರ್ವಕವಾಗಿ ಇಂಗ್ಲೀಷ್ ಹೇರಬಾರದು.ಮೊದಲು ಮಾತೃಭಾಷೆ ನಂತರ ಉಳಿದವುಗಳು.ಇತರ ಭಾಷೆಗಳಲ್ಲಿ ದಡ್ಡರಾದರೂ ಪರವಾಗಿಲ್ಲ.ಕನ್ನಡದಲ್ಲಿ ದಡ್ಡರಾಗಬಾರದು.
ಹತ್ತನೇ ತರಗತಿಯಲ್ಲಿ ನಾನು ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 100 ಅಂಕಗಳಿಗೆ 99 ಅಂಕ ಪಡೆದಿದ್ದೆ.ಇದಕ್ಕಾಗಿ ಕನ್ನಡ ಅಧ್ಯಾಪಕರು ಕೊಂಡಾಡಿದರಾದರೂ ಉಳಿದ ಆ ಒಂದು ಅಂಕ ಎಲ್ಲಿ ಹೋಯ್ತು ಎಂಬುದು ನನಗಿನ್ನು ಪ್ರಶ್ನೆಯಾಗಿಯೇ ಉಳಿದಿದೆ.ನನ್ನ ತಂದೆ-ತಾಯಿ ಕೂಡ ಈ ಬಗ್ಗೆ ನನ್ನನ್ನು ಪ್ರಶ್ನಿಸಿದ್ದೂ ಇದೆ.
ಇಂಗ್ಲೀಷ್ ನಲ್ಲಿ ಎಷ್ಟೆ ಅಂಕ ಬರಲಿ,ಕನ್ನಡ ಭಾಷೆಯಲ್ಲಿ ಮಾತ್ರ ಕಡಿಮೆ ಅಂಕ ಬರಬಾರದು ಎಂಬುದು ನಮ್ಮ ಪಾಲಕರ ಆಶೆಯಾಗಿತ್ತು.ಹೀಗಾಗಿ ಕನ್ನಡ ಭಾಷೆಯಲ್ಲಿ ಪ್ರಭಂದ ಬರೆಯುವುದು,ಭಾಷಣ ಮಾಡುವುದು ನನ್ನ ಇಷ್ಟದ ವಿಷಯವಾಗಿತ್ತು.
ಈಗ ನಾನು ವೈಧ್ಯನಾಗಿದ್ದರೂ ಕನ್ನಡವನ್ನೇ ಹೆಚ್ಚಾಗಿ ಬಳಸುತ್ತೇನೆ.ಇದು ನನ್ನ ದೊಡ್ಡಸ್ತಿಕೆಯಲ್ಲ.ನನ್ನ ಕರ್ತವ್ಯ. ಇಂತಹ ಮನಸ್ಥಿತಿಗೆ ನಮ್ಮ ಲಿಟಲ್ ಹಾರ್ಟ್ಸ್ ಶಾಲೆ ಮತ್ತು ಶಿಕ್ಷಕರೆಲ್ಲರೂ ಕಾರಣ.
ನನ್ನನ್ನು ಸೇರಿದಂತೆ ಹಲವು ವಿಧ್ಯಾರ್ಥಿಗಳಲ್ಲಿ ಕನ್ನಡ ಹಸಿರಾಗಿಯೇ ಉಳಿಯಲು ನಮ್ಮ ಶಾಲೆಯಲ್ಲಿ ಯಶಸ್ವಿಯಾಗಿ ಪ್ರಯತ್ನಿಸುತ್ತಿರುವ ಕಾರಣಕ್ಕಾಗಿಯೇ ಇಂತಹ ಮಕ್ಕಳ ಸಾಹಿತ್ಯ ಸಮ್ಮೇಳನಗಳೇ ಸಾಕ್ಷಿ.ಇಂತಹ ಹಲವು ಸಾಕ್ಷಿಗಳಿಗೆ ನಮ್ಮ ಶಾಲೆ ಉದಾಹರಣೆಯಾಗಲಿದೆ ಎಂದು ಖಚಿತವಾಗಿ ನಾನು ಹೇಳಬಲ್ಲೆ.
“ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ” ಎಂಬ ಹೆಸರಿನಲ್ಲಿ ಹೊಸ ಭಾಷೆ ಬರೆದ ಶಾಲೆ ಎಂಬ ಕೀರ್ತಿಗೆ ಭಾಜನವಾದದ್ದು ನಮ್ಮ ಲಿಟಲ್ ಹಾರ್ಟ್ಸ್ ಶಾಲೆ ಎಂದು ಹೇಳಲು,ಶಾಲೆಯ ಹಳೆಯ ವಿಧ್ಯಾರ್ಥಿಯಾದ ನನಗೆ ತುಂಬಾ ಹೆಮ್ಮೆ.ಈ ಸಮ್ಮೇಳನ ಅಸ್ಮರಣೀಯ, ಅನುಕರಣೀಯ,ಆಚರಣೀಯ !
ಇಂತಹ ಸಮ್ಮೇಳನವನ್ನು ಯಾವ ಶಾಲೆಯಲ್ಲೂ, ಯಾವ ಭಾಷೆಯಲ್ಲೂ ಹಮ್ಮಿಕೊಂಡ ಮಾಹಿತಿ ನನಗೆ ದೊರಕಿಲ್ಲ.ಇಂತಹ ಕಾರಣಗಳಿಗಾಗಿ ನಮ್ಮ ಶಾಲೆಯ ಹೆಸರು ಮೊದಲ ಸಾಲಿನಲ್ಲಿಯೇ ಇದೆ,ಇರುತ್ತದೆ ಎಂಬ ಭರವಸೆ ನನ್ನದು.
ನಾನು ಇಂದು ಏನೇ ಸಾಧಿಸಿದ್ದರೂ,ಏನೇ ಅಭ್ಯಾಸ ಮಾಡಿದ್ದರೂ ಅದರ ಕೀತಿ ನಮ್ಮ ಶಾಲೆಗೆ ಮತ್ತು ಶಿಕ್ಷಕರಿಗೆ ಸಲ್ಲುತ್ತದೆ.ನನ್ನನ್ನು ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನನ್ನಾಗಿ ಮಾಡಿರುವುದು,ನನ್ನ ಶಾಲೆ.ಇಂತಹ ಗೌರವ ಎಲ್ಲರಿಗೂ ಸಿಗುವುದಿಲ್ಲ. ಡಾಕ್ಟರೇಟ್ ಪದವಿಗೂ ಮಿಕ್ಕಿದ ಗೌರವ ನನಗೆ ಸಿಕ್ಕಿದೆ. ಅದಕ್ಕಾಗಿ ಇದಕ್ಕೆ ಕಾರಣರಾದ ಎಲ್ಲರಿಗೂ ನಾನು ಈ ವೇದಿಕೆಯ ಮೂಲಕ ಕೃತ್ಯಗಳನ್ನು ಸಲ್ಲಿಸುತ್ತೇನೆ ಎಂದು ಡಾ.ಅಭಿಷೇಕ ಸ್ವಾಮಿ ಹೇರೂರ ತಿಳಿಸಿದರು.