ರೇಲ್ವೆ ಲೈನ್ ಅನುದಾನಕ್ಕ ಸಚಿವರಲ್ಲಿ‌ ಮನವಿ.

ಗಂಗಾವತಿ: ಗಂಗಾವತಿ ರೇಲ್ವೆ ನಿಲ್ದಾಣದಿಂದ ಬಳ್ಳಾರಿ ಜಿಲ್ಲೆಯ ದರೋಜಿ ಗ್ರಾಮದ ರೇಲ್ವೆ ನಿಲ್ದಾಣದವರೆಗೆ ನೂತನ ರೇಲ್ವೆ ಮಾರ್ಗದ ಕಾಮಗಾರಿ ಆರಂಭಿಸಲು ರಾಜ್ಯದ ಪಾಲಿನ ಹಣವನ್ನು ಮಂಜೂರು ಮಾಡಲು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರನ್ನು ಭೇಟಿ ಮಾಡಿದ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಮನವಿ ಪತ್ರ ಸಲ್ಲಿಸಿ,ರೇಲ್ವೆ ಇಲಾಖೆಯ ಸರ್ವೆ ಪ್ರಕಾರ ಗಂಗಾವತಿ-ದರೋಜಿ ಮಾರ್ಗ 31.30 ಕಿ.ಮಿ.ಅಂತರವಿದ್ದು ರೂ. 919.49 ಕೋಟಿ ಅಂದಾಜು ಮೊತ್ತವನ್ನು ನಿಗದಿಪಡಿಸಲಾಗಿದೆ. ಈ ಕಾಮಗಾರಿಗೆ ರಾಜ್ಯದ ಅನುದಾನವನ್ನು ನೀಡಲು ಸಚಿವರಲ್ಲಿ ವಿನಂತಿಸಿದರು.

ಈ ರೇಲ್ವೆ ಮಾರ್ಗ ರಚನೆಯಾದರೆ ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಿಗೆ ಸಂಪರ್ಕಿಸಲು ಮತ್ತು ಧಾರ್ಮಿಕ ಕೇಂದ್ರಗಳಾದ ಶ್ರೀಶೈಲ, ತಿರುಪತಿಗಳಿಗೆ ಹೋಗಿ ಬರಲು ಜನರಿಗೆ ಅನುಕೂಲವಾಗುತ್ತದೆ. ಬಳ್ಳಾರಿ, ಗುಂತಕಲ್, ಗುಂಟೂರು ರೇಲ್ವೆ ಜಂಕ್ಷನ್‌ಗಳನ್ನು ಈ ಮಾರ್ಗ ಸಂಪರ್ಕಿಸುವುದರಿಂದ ಬೆಂಗಳೂರು, ಮದ್ರಾಸ್ ಮುಂತಾದ ನಗರಗಳಿಗೆ ಪ್ರಯಾಣಿಸಲು ಈ ಭಾಗದ ಪ್ರವಾಸಿಗರಿಗೆ ಸರಳವಾಗುತ್ತದೆ.ಆದ್ದರಿಂದ ತಾವು ಈ ಬಗ್ಗೆ ಮೊದಲ ಆದ್ಯತೆ ಕೊಟ್ಟು ಗಂಗಾವತಿ-ದರೋಜಿ ರೇಲ್ವೆ ಮಾರ್ಗದ ಕಾಮಗಾರಿಯನ್ನು ಕೂಡಲೇ ಆರಂಭಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಚಿವರನ್ನು ಅವರು ಕೋರಿದರು.

ಇದೇ ರೀತಿ ಗಂಗಾವತಿ-ಬಾಗಲಕೋಟ ರೇಲ್ವೆ ಲೈನ್ ಮಾರ್ಗದ ಸರ್ವೇ ಕಾರ್ಯ ಮುಗಿದಿದ್ದು ಅದಕ್ಕೂ ಸಹ ರಾಜ್ಯ ಸರಕಾರದ ಅನುದಾನವನ್ನು ನೀಡಲು ಮಂತ್ರಿ ಮಂಡಳದಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ಈ ಸಂಧರ್ಭದಲ್ಲಿ ವಿನಂತಿಸಲಾಯಿತು.

ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ಎಚ್.ಗಿರೇಗೌಡ್ರು ನಗರ ಸಭೆಯ ಹಿರಿಯ ಸದಸ್ಯ ಮನೋಹರಸ್ವಾಮಿ ಹಿರೇಮಠ,ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಮತ್ತು ನಿರ್ದೇಶಕ ಶರಣೆಗೌಡ ಮಾಲಿ ಪಾಟೀಲ್ ಮುಂತಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *