ನಿಯಮ ಬಾಹಿರವಾಗಿ ಉಸುಕು,ಬೆಣಚು ಕಲ್ಲು ಹೊತ್ತೊಯ್ಯುವ ಲಾರಿಗಳಿಗಿಲ್ಲ ಕಡಿವಾಣ !
ಗಂಗಾವತಿ:ನಿಯಮ ಬಾಹಿರವಾಗಿ ಕೊಪ್ಪಳ ಜಿಲ್ಲೆಯಾದ್ಯಂತ ಹಗಲು-ರಾತ್ರಿ ಉಸುಕು,ಬೆಣಚು ಕಲ್ಲು ಮತ್ತು ಅದರ ಪುಡಿಯನ್ನು ಹೊತ್ತು ಯಾವುದೇ ಹೊದಿಕೆ ಇಲ್ಲದೇ ಸಂಚರಿಸುತ್ತಿರುವ ಲಾರಿಗಳಿಗೆ ಕಡಿವಾಣ ಇಲ್ಲದಂತಾಗಿದೆ.
ಬಾಗಲಕೋಟೆ ಜಿಲ್ಲೆಯ ಇಲಕಲ್ ಮತ್ತಿತರ ಭಾಗಗಳಿಂದ ಕೊಪ್ಪಳ ಭಾಗದ ಸಿಮೆಂಟ್ ಕಾರ್ಖಾನೆಗಳಿಗೆ ಚೆಲ್ಲಿ ಕಲ್ಲುಗಳನ್ನು ಸಾಗಿಸುವ ಲಾರಿಗಳು ಟ್ರಕ್ ಮೇಲೆ ಹೊದಿಕೆ ಅಳವಡಿಸಿಕೊಳ್ಳದೆ ಇರುವುದರಿಂದ ಅತೀ ವೇಗವಾಗಿ ಸಂಚರಿಸುವ ಲಾರಿಗಳು,ರಸ್ತೆ ಉಬ್ಬುಗಳನ್ನು ದಾಟುವಾಗ ಬೆಣಚು ಕಲ್ಲುಗಳು ಲಾರಿಯಿಂದ ಸಿಡಿದು,ಹಿಂದೆ ಬರುವ ವಾಹನಗಳ ಗ್ಲಾಸ್ ಗಳನ್ನು ಒಡೆದು ಹಾಕುತ್ತಿವೆ.
ಬೆಣಚು ಕಲ್ಲುಗಳು,ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳ ಟಯರ್ ಗೆ ಸಿಕ್ಕಿ ,ಅಲ್ಲಿಂದ ಸಿಡಿದು ಬೇರೆ ಬೇರೆ ವಾಹನಗಳ ಗ್ಲಾಸ್ ಗಳಿಗೆ ಬಡಿದು, ಗ್ಲಾಸ್ ಗಳನ್ನು ಸೀಳಿ ಹಾಕುತ್ತಿವೆ.ಇದರಿಂದ ಬಡ ವಾಹನಗಳ ಮಾಲೀಕರು ನಷ್ಟಕ್ಕೆ ಈಡಾಗುತ್ತಿದ್ದಾರೆ.
ಇದೇ ರೀತಿ ಬೆಣಚು ಕಲ್ಲಿನ ಪುಡಿ ಹಾಗೂ ಉಸುಕು ಸಿಡಿದು, ದ್ವಿ ಚಕ್ರ ವಾಹನ ಚಾಲಕರ ಕಣ್ಣು ಸೇರಿ,ಅಫ಼ಘಾತಗಳಾಗುತ್ತಿವೆ.
ಮುನಿರಾಬಾದ್,ಕುಷ್ಟಗಿ,ಗಿಣಿಗೇರಾ,ಕೊಪ್ಪಳ, ಗಂಗಾವತಿ ಭಾಗದಲ್ಲಿ ಇಂತಹ ವಾಹನಗಳ ಓಡಾಟ ಜಾಸ್ತಿಯಾಗಿದ್ದರೂ ಆರ್.ಟಿ.ಓ.,ಮತ್ತು ಪೋಲಿಸ್ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.
ಹೊದಿಕೆ ಇಲ್ಲದೇ ಮಣ್ಣು ,ಕಲ್ಲು ,ಉಸುಕು ಹೊತ್ತೊಯ್ಯುವ ಎಲ್ಲಾ ವಾಹನಗಳ ಮೇಲೆ ಜಿಲ್ಲಾ ಆಡಳಿತ ಕ್ರಮಕೈಗೊಳ್ಳಬೇಕಾಗಿದೆ.