ಶ್ರೀಶೈಲ,ಮಂತ್ರಾಲಯ ಪ್ರಯಾಣಿಕರಿಗೆ ತೊಂದರೆ, ಕರ್ನೂಲ್ ಟೋಲ್ ಪ್ಲಾಜಾ ಮೇಲೆ ದೂರು ದಾಖಲು.
ಗಂಗಾವತಿ: ಪವಿತ್ರ ಧರ್ಮ ಕ್ಷೇತ್ರ ಶ್ರೀಶೈಲಕ್ಕೆ ಪ್ರಯಾಣಿಸುವವರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ- 44
(ಈ ಹಿಂದೆ ಕರೆಯಲಾಗುತ್ತಿದ್ದ ಹೆದ್ದಾರಿ ಸಂಖ್ಯೆ-7) ರಲ್ಲಿರುವ ಕರ್ನೂಲ್ ಟೋಲ್ ಪ್ಲಾಜಾದಲ್ಲಿ ಸಾರ್ವಜನಿಕ ಸೌಲಭ್ಯಗಳ ಕೊರತೆಯನ್ನು ಗಮನಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಲಾಗಿದೆ.
ಟೋಲ್ ಪ್ಲಾಜಾದ ಎರಡೂ ಬದಿಯಲ್ಲೂ ಶೌಚಾಲಯಗಳು ದುರಸ್ತಿಯಲ್ಲಿದ್ದು ,ಅವುಗಳನ್ನು ಖಾಯ೦ ಆಗಿ ಮುಚ್ಚಲಾಗಿದೆ.ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಕರ್ನಾಟಕ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕರಾದ ಅಶೋಕಸ್ವಾಮಿ ಹೇರೂರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ದೂರು ಸಲ್ಲಿಸಿದ್ದಾರೆ.
ಮತ್ತೊಂದು ಧರ್ಮ ಕ್ಷೇತ್ರವಾದ ಮಂತ್ರಾಲಯ ಮತ್ತು ಕರ್ನೂಲ್ ಹತ್ತಿರದ ಶಕ್ತಿ ದೇವತೆಯ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು ,ಪ್ರತಿದಿನ ಲಕ್ಷಾಂತರ ಭಕ್ತರು ಈ ಮಾರ್ಗವಾಗಿ ಸಂಚರಿಸುತ್ತಿದ್ದು ಮಹಿಳಾ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಇಮೇಲ್ ಸಂದೇಶದ ಮೂಲಕ ಅವರು ದೂರಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ದೂರು ಸಲ್ಲಿಸಲಾಗಿದ್ದು ,ಕೂಡಲೇ ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿ,ಪಬ್ಲಿಕ್ ಗ್ರಿವಿಯನ್ಸ್ ಪೊರ್ಟಲ್ ನಲ್ಲಿಯೂ ಹೇರೂರ, ದೂರು ದಾಖಲಿಸಿದ್ದಾರೆ.
ಹೈದ್ರಾಬಾದ್ ಹಾಗೂ ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಟೋಲ್ ಪ್ಲಾಜಾ ಅಸ್ತಿತ್ವದಲ್ಲಿದ್ದು ,ಲಕ್ಷಾಂತರ ಪ್ರಯಾಣಿಕರು ಇಂತಹ ಅನಾನುಕೂಲತೆಗಳ ಬಗ್ಗೆ ದೂರು ಸಲ್ಲಿಸದಿರುವುದು ವಿಷಾಧಕರ ಎಂದವರು ಹೇಳಿದ್ದಾರೆ.