Notice: Function _load_textdomain_just_in_time was called incorrectly. Translation loading for the jetpack-boost domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/u799944202/domains/vanijyodhyamavarte.com/public_html/wp-includes/functions.php on line 6114

Notice: Function _load_textdomain_just_in_time was called incorrectly. Translation loading for the wordpress-seo domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/u799944202/domains/vanijyodhyamavarte.com/public_html/wp-includes/functions.php on line 6114
ಇದನ್ನೇ ಓದಬೇಕು ! ಇದನ್ನೇ ಮಾಡಬೇಕು ! ಎಂದು ಪಾಲಕರು ಕಡ್ಡಾಯ ಮಾಡುವುದು ಮಹಾ ಅಪರಾಧ, ಏಕೆಂದರೆ… - Vanijyodhyamavarte

ಮಾನವ ಜನ್ಮಕ್ಕೆ ‘ಹಿಂದೆ ಗುರು ಇರಬೇಕು,ಮುಂದೆ ಗುರಿ ಇರಬೇಕು’ ಎಂಬುದು ನಾಣ್ಣುಡಿ.ಈ ನಾಣ್ಣುಡಿಯಂತೆ ಎಲ್ಲವೂ ನಡೆದರೆ ಬದುಕು ಬದುಕಾಗುತ್ತದೆ.ಇಲ್ಲದಿದ್ದರೆ ಭವಣೆಯಾಗುತ್ತದೆ.

ಓದುವಾಗಲೂ ಮುಂದಿನ ಗುರಿಯನ್ನು ಇಟ್ಟು ಕೊಂಡು ಓದಿದರೆ,ಸಾಧನೆ ಸರಳ ಸಾಧ್ಯ.ಇಲ್ಲದಿದ್ದರೆ ಎಲ್ಲಾ ಕ್ಷೇತ್ರಗಳಿಗೂ ಕೈಹಾಕಿ,ಕೈ ಸುಟ್ಟು ಕೊಂಡು ಯಶಸ್ಸು ಪಡೆಯುವುದು ಬಹಳ ಕಷ್ಟ ಮಾತ್ರವಲ್ಲ ,ಅಪಯಶಸ್ಸು ಆಗುವುದೇ ಹೆಚ್ಚು.

ನನ್ನ ಹಲವು ಮಿತ್ರರು ಅಪಯಶಸ್ಸು ಹೊಂದಿ, ಜೀವನದಲ್ಲಿ ಜಿಗುಪ್ಸೆಗೊಂಡಿದ್ದಾರೆ.ನಾನೂ ಕೂಡ ಎಲ್ಲಾ ಕ್ಷೇತ್ರಗಳಿಗೂ ಕೈಹಾಕಿ ಕೈ ಸುಟ್ಟುಕೊಂಡದ್ದೂ ಇದೆ.ಆದರೆ ಅದು ಹೇಗೋ ಬದುಕು ಕಟ್ಟಿಕೊಂಡು ಗಟ್ಟಿಯಾಗಿ ಬಿಟ್ಟಿದ್ದೇನೆ.

ನನ್ನ ಬಗ್ಗೆ ಹೇಳುವುದಾದರೆ…

ಒಬ್ಬ ಶರಣರು “ನಿಮ್ಮ ಮಗ ಎಂಜನೀಯರ್ ಆಗುತ್ತಾನೆ” ಎಂದು ನಮ್ಮ ತಂದೆಯ ಮುಂದೆ ಹೇಳಿದ್ದರು.ಅವರು ಹೇಳುವಾಗ ನಾನೂ ಅಲ್ಲಿ ಹಾಜರಿದ್ದೆ.

ಹೀಗೆ ಹೇಳಿ ಅವರು ಒಂದು ತುಂಡು ಒಣ ರೊಟ್ಟಿಯನ್ನು ಆಶೀರ್ವಾದದ ರೂಪದಲ್ಲಿ ಕೊಟ್ಟಿದ್ದು ನನಗಿನ್ನು ನೆನಪಿದೆ.ಆದರೆ ಜೀವನದಲ್ಲಿ ಒಣ ರೊಟ್ಟಿಯೇ ಗತಿಯಾಗಿದ್ದರೆ,ಕಷ್ಟವಾಗುತ್ತಿತ್ತು.

ತಂದೆ-ತಾಯಿಯ ಪುಣ್ಯ ಸೌಖ್ಯವಾಗಿದ್ದೇನೆ.(ಆ ಶರಣರ ಹೆಸರು ಪ್ರಸ್ಥಾಪಿಸಲು ನನಗೆ ಮನಸ್ಸಿಲ್ಲ).ಅಂದಿನಿಂದಲೇ ನಾನು ಇಂಜಿನಿಯರ್ ಆಗುತ್ತೇನೆಂದು ನಮ್ಮ ತಂದೆ-ತಾಯಿ ಅಂದು ಕೊಂಡಿರಲು ಸಾಕು.ಅದಕ್ಕಾಗಿ ಅವರು ಸೈನ್ಸ್ ಅಭ್ಯಾಸ ಮಾಡಲು ದುಂಬಾಲು ಬಿದ್ದಿದ್ದರು.ಆದರೆ ಅದು ನನಗೆ ಕಷ್ಟದ ವಿಷಯವಾಗಿತ್ತು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ  ಚಿಕ್ಕೇನಕೊಪ್ಪ ಮತ್ತು ಮಸಬಹಂಚಿನಾಳ ಗ್ರಾಮಗಳಲ್ಲಿ ನಮ್ಮ ತಂದೆ ದಿವಂಗತ ಶ್ರೀ ವೀರಭದ್ರಯ್ಯ ಸ್ವಾಮಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಸಮೀಪದ ಭಾನಾಪೂರ ಗ್ರಾಮ ನಮ್ಮ ತಾಯಿಯ ತವರು ಮನೆ, ಹೀಗಾಗಿ ನಾನು ಭಾನಾಪೂರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಅಭ್ಯಾಸ ಮಾಡಿದೆ.

ನಂತರ ನಮ್ಮ ತಂದೆಯವರು ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿನ ಶಾಲೆಗೆ ವರ್ಗವಾಗಿದ್ದರಿಂದ ಅಲ್ಲಿಯೇ ಆರನೇ ತರಗತಿಯವರಿಗೆ ಅಭ್ಯಾಸ ಮಾಡಿರುವೆ.ಆಟಗಳಲ್ಲಿ ಭಾಗವಹಿಸುದ್ದು ತೀರಾ ಕಡಿಮೆ.

ಅಲ್ಲಿಯವರೆಗೂ ನಾನು ಬೆಳೆದದ್ದು ವಿ.ಐ.ಪಿ.ಮಕ್ಕಳ ತರಹವೇ.ವಿಧ್ಯಾರ್ಥಿಗಳು ಯಾರೂ ಚಪ್ಪಲಿ ಹಾಕದ ಸಮಯದಲ್ಲಿ ನನ್ನ ಕಾಲಲ್ಲಿ ಬಾಟಾ ಕಂಪನಿಯ ಚಪ್ಪಲಿ, ಸ್ವಚ್ಛ ಮತ್ತು ಹೊಸ ಬಟ್ಟೆ ,ತಲೆಗೆ ಟಾಟಾ ಕಂಪನಿಯ ಸುಗಂಧ ಬರಿತ ಎಣ್ಣೆ,ಕೊರಳಲ್ಲಿ ಬಂಗಾರದ ಚೈನು, ಕೈಯಲ್ಲಿ ಕೆಂಪು ಹರಳಿನ ಬಂಗಾರದ ಉಂಗುರ, ಹಲ್ಲುಜ್ಜಲು ಬಿನಾಕಾ ಟೂಥ ಪೇಸ್ಟ್, ಬ್ರಷ್ ಮತ್ತು ಕುಟಿಕುರ ಎಂಬ ಹೆಸರಿನ ಫ಼ೇಸ್ ಪೌಡರ್.

ಏಳನೇ ತರಗತಿ ಉತ್ತೀರ್ಣನಾದ ಕೂಡಲೇ ಬೆಳಗಾವಿ ನಗರದ ಶ್ರೀ ಸಿದ್ದೇಶ್ವರ ಹೈಸ್ಕೂಲ್ ನಲ್ಲಿ 8 ನೇ ಕ್ಲಾಸ್ ಗೆ ನಮ್ಮ ಮಾವ ನನಗೆ ಅಡ್ಮಿಷನ್ ಕೊಡಿಸಿದ್ದ.ಆದರೆ ಅಪ್ಪ-ಅಮ್ಮನನ್ನು ನೆನೆಸಿಕೊಂಡು  ವಾಪಾಸು ಬಂದು ಬಿಟ್ಟೆ.

ನಮ್ಮ ಸ್ವಂತ ಊರು ಹೇರೂರ ಆಗಿದ್ದರಿಂದ,ಊರಿನ  ಸಮೀಪ ಇರಲೆಂದು ನಮ್ಮ ತಂದೆ ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿದ್ದ ಕನಕಗಿರಿ ಗ್ರಾಮಕ್ಕೆ(ಈಗಿನ ಪಟ್ಟಣಕ್ಕೆ ವರ್ಗ ಮಾಡಿಸಿ ಕೊಂಡಿದ್ದರು) ಅಲ್ಲಿಯೇ ನನ್ನ 7 ನೇ ತರಗತಿ ಮತ್ತು ಹೈಸ್ಕೂಲ್ ಅಭ್ಯಾಸ ಮುಗಿದದ್ದು. ಒಂದಿಷ್ಟು ಸ್ಥಿತಿವಂತ ಮಕ್ಕಳ ಗೆಳೆತನದಿಂದ,ಶಾಲೆಗೆ ಹೋಗುವುದಾಗಿ ಹೇಳಿ ಗಂಗಾವತಿಯಲ್ಲಿ ಸಿನಿಮಾ, ಹೋಟಲ್ ಎಂದು ಕಾಲ ಕಳೆದದ್ದಿದೆ.

ಆಗ ನಮ್ಮ ಪ್ರೌಢ ಶಾಲೆಯಲ್ಲಿ ಪಿ.ಯು.ಸಿ.ಶಿಕ್ಷಣ ಆರಂಭವಾಗಿದ್ದರಿಂದ ನಮ್ಮ ಶಾಲೆಯ ಸಮಯ,ಬೆಳಿಗ್ಗೆ 11.00 ಗಂಟೆಯಿಂದ ಸಾಯಂಕಾಲ 5.30 ಆಗಿತ್ತು. ಗಂಗಾವತಿ ಪಟ್ಟಣಕ್ಕೆ ಬಂದು ಹೋಗಲು ಈ ಸಮಯ ನಿರಾಂತಕವಾಗಿತ್ತು.

ಹೀಗಾಗಿ ಓದುವುದು ಕಡಿಮೆಯಾಯ್ತು.ಗಣಿತದಲ್ಲಿ ಅಲ್ಜಿಬ್ರಾ ವಿಷಯ ಬೇರೆ ಕಬ್ಬಿಣದ ಕಡಲೆಯಾಗಿತ್ತು. ಓದುವುದನ್ನು ಅಲಕ್ಷಿಸಿ,ಕತೆ- ಕವನ ಬರೆಯಲು ಆರಂಭಿಸಿದ್ದೆ.ಇದಕ್ಕೆ ನನ್ನ ಗಣಿತ ಶಿಕ್ಷಕರಾಗಿದ್ದ ಶ್ರೀ ಎ.ಎಮ್.ಮದರಿಯವರ ಪ್ರೋತ್ಸಾಹ ಬೇರೆ ಇತ್ತು.

ಕಿಸೆಯಲ್ಲಿ ಅಪ್ಪನ ರೊಕ್ಕ.ಪ್ಯಾ೦ಟ್ ನ ಒಂದು ಪಾಕೆಟ್ ನಲ್ಲಿ ಗೋಡಂಬಿ ಇನ್ನೊಂದರಲ್ಲಿ ಅಡಿಕೆ.ಸಾಯಂಕಾಲ ಕನಕಗಿರಿಯ ಪ್ರವಾಸಿ ಮಂದಿರದ ಖಾರಾ ಮತ್ತು ಮೈಸೂರು ಪಾಕ್.ಯಾವುದಕ್ಕೂ ಕೊರತೆ ಇಲ್ಲದೆ,ಬೆಳೆದು ಬಿಟ್ಟೆ.

ಏನು ಓದಿದ್ದೆನೇನೋ ಏನು ಬರೆದಿದ್ದೆನೇನೋ ಅಂತು ಉತ್ತೀರ್ಣನಾಗುತ್ತಾ ಬಂದೆ.1981 ನೇ ಇಸ್ವಿಯ ಎಸ್.ಎಸ್.ಎಲ್.ಸಿ.ಯಲ್ಲಿ 90 ಜನ ವಿದ್ಯಾರ್ಥಿಗಳಲ್ಲಿ ಉತ್ತೀರ್ಣರಾಗಿದ್ದು ನಾವು ಐದು ಜನ ಮಾತ್ರ.

ನಾನು,ಪೃತ್ವಿರಾಜ್ ವರ್ಣೆಕರ್,(ಈಗ ನ್ಯಾಯಾಧೀಶ), ಶಂಕರಪ್ಪ ತಿಪ್ಪನಾಳ (ಎಕ್ಸೈಸ್ ಇನ್ಸಪೆಕ್ಟರ್ ಆಗಿ ನಿವೃತ್ತ ನಾಗಿದ್ದಾನೆ),ವೆಂಕಟೇಶ ಜನಾದ್ರಿ(ಕಿರಾಣಿ ವರ್ತಕ),ಸಿದ್ದಣ್ಣ ಕಪ್ಲಿ (ಖಾಸಗಿ ಏಜೆನ್ಸಿ) ಇವರುಗಳು ಮಾತ್ರ ಪಾಸು ಆದದ್ದು.

ಪಾಸಾದಾ 5 ಜನರ ಕಥೆ ಹೀಗಿದ್ದರೆ,ನಮ್ಮ ಜೊತೆಗೆ ಫ಼ೇಲಾಗಿದ್ದವರು ಕನಕಗಿರಿಯಲ್ಲಿಯೇ ಎಜ್ಯೂಕೇಶನ್ ಕೋರ್ಸ್(ಟಿ.ಸಿ.ಎಚ್.ತರಹದ ಕೋರ್ಸ) ಮಾಡಿ ಕೆಲವರು ಶಿಕ್ಷಕರಾಗಿದ್ದಾರೆ.ಇತರರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ.

ಎಸ್.ಎಸ್.ಎಲ್.ಸಿ.ಆದ ನಂತರ ಪಿ.ಯು.ಸಿ.ಸೈನ್ಸ್ ಅಭ್ಯಾಸ ಮಾಡಲು,ಹೊಸಪೇಟೆ ನಗರದ ವಿಜಯನಗರ ಕಾಲೇಜ್ ನಲ್ಲಿ ಪ್ರವೇಶ ಪಡೆದಿದ್ದೆ.ಮತ್ತೇ ಊರು ನೆನೆಸಿಕೊಂಡು,ಹಿಂತಿರುಗಿ ಬಂದು ಗಂಗಾವತಿ ನಗರದ ಸರಕಾರಿ ಜ್ಯೂನಿಯರ್ ಕಾಲೇಜ್ ಸೇರಿಕೊಂಡೆ.

ಈ ಅವಧಿಯಲ್ಲಿಯೇ ಪತ್ರಿಕೆಗಳಿಗೆ ವರದಿ, ಲೇಖನಗಳನ್ನು ಬರೆಯುವುದರಲ್ಲಿ ನಿರತನಾದೆ. ಇದರಲ್ಲಿಯೇ ಆಗಿನ ಕಾಲದಲ್ಲಿ ಸಾರ್ವಜನಿಕವಾಗಿ ಬಹಳಷ್ಟು ಗುರುತಿಸಿಕೊಂಡು ಬಿಟ್ಟೆ.

ಹೈಸ್ಕೂಲ್ ವಿಧ್ಯಾರ್ಥಿಯಾಗಿದ್ದಾಗ ನಾನು ಬರೆದಿದ್ದ ಕವನಗಳ ಸಂಕಲನ ” ಅಗ್ರರಂಗ” ಪ್ರಿ೦ಟ್ ಮಾಡಿಸಿದೆ.”ಚಿಗುರು” ಎಂಬ ಸಂಪಾದಿತ ಲೇಖನಗಳ ಸಂಕಲನ ಹೊರ ತಂದೆ.“ರಾಯಚೂರು ಜಿಲ್ಲಾ ಲೇಖಕರು” ಎಂಬ ಲೇಖಕರ ವಿಳಾಸಗಳ ಪುಸ್ತಕ ಪ್ರಕಟಿಸಿದೆ.

ನವನಾಡು(ಹುಬ್ಬಳ್ಳಿ),ನವೋದಯ(ಗದಗ) ನಾಡ ನುಡಿ, ಪ್ರಜಾ ಪ್ರಪಂಚ,ಪ್ರಜಾ ದರ್ಶಿನಿ(ಗಂಗಾವತಿ), ಪೋಲೀಸ್ ಫ಼ೈಲ್, ಅಭಿಮಾನಿ, ಮಾರ್ಧನಿ, ಚಕೋರಿ, ಸಂಚು (ಬೆಂಗಳೂರು) ಕ್ರೈಮ್ ಸಮಾಚಾರ (ಬಳ್ಳಾರಿ) ಮತ್ತಿತರ ಪತ್ರಿಕೆಗಳ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ.ಒಟ್ಟಾರೆ ಅಭ್ಯಾಸಕ್ಕೆ ಪ್ರಾಮುಖ್ಯತೆಯನ್ನೇ ಕೊಡಲಿಲ್ಲ.

ಸೈನ್ಸ್ ಅಭ್ಯಾಸದಲ್ಲಿ ನನಗೆ ಆಸಕ್ತಿ ಇಲ್ಲದಿದ್ದರೂ “ಶರಣರು ಹೇಳಿದ್ದಾರೆ, ನೀನು ಇಂಜನೀಯರ್ ಆಗ್ತೀಯಾ ಸೈನ್ಸ್ ಓದು” ಎಂದು ಅಪ್ಪ ಒತ್ತಾಯಿಸುತ್ತಲೇ ಬಂದಿದ್ದ. ಬಿ.ಎ.ಓದಿದ್ದ ಅಪ್ಪ ; ನನಗ್ಯಾಕೋ ಬಿ.ಎ.,ಎಮ್.ಎ., ಓದುವುದು ಬೇಡ ಎನ್ನುತ್ತಿದ್ದ.

ನನ್ನ ಜ್ಯೂನಿಯರ್ ಗಳೆಲ್ಲಾ ಎಮ್.ಎ., ಪಿಎಚ್.ಡಿ., ಮಾಡಿ ಉಪನ್ಯಾಸಕರಾಗಿದ್ದಾರೆ.ನಾನೂ ಖಂಡಿತ ಹಾಗೆ ಆಗುತ್ತಿದ್ದೆ.ಏಕೆಂದರೆ ಉಪನ್ಯಾಸ ನನ್ನ ನೆಚ್ಚಿನ ಹವ್ಯಾಸ. ಎಲ್ಲಿ ಪಾಠ ಮಾಡಲು ಕರೆಯುತ್ತಾರೋ, ಅಲ್ಲಿ ಈಗಲೂ ನಾನು ಹಾಜರಾಗುತ್ತೇನೆ.ಅದು ಮೈಸೂರಿನ ಪೋಲೀಸ್ ಅಕಾಡೆಮಿ ಆದೀತು ! ಫ಼ಾರ್ಮಸಿ ಕಾಲೇಜ್ ಗಳಾದರೂ ಆದೀತು !

ನಗರಗಳಲ್ಲಿ ಮೆಡಿಕಲ್ ಶಾಪ್ ಗಳನ್ನು ನೋಡಿ,ಅವರು ಫ಼್ಯಾನ್ ಕೆಳಗೆ, ನಿರಾಳವಾಗಿ ವ್ಯಾಪಾರ ಮಾಡುವುದನ್ನು ನೋಡಿ,ನಾನೂ ಮೆಡಿಕಲ್ ಶಾಪ್ ಮಾಡಿದರಾಯ್ತು ಎಂದು ಕೊಂಡು,ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯ  ಫ಼ಾರ್ಮಸಿ ಕಾಲೇಜ್ ನಲ್ಲಿ 1986 ರಲ್ಲಿ ಡಿಪ್ಲೊಮಾ ಇನ್ ಫ಼ಾರ್ಮಸಿ ಅಭ್ಯಾಸ ಮಾಡಿ ಬಂದೆ.

ಈ ಸಂಧರ್ಭದಲ್ಲಿ ನನ್ನ ಖರ್ಚು ವೆಚ್ಚಗಳಿಗಾಗಿ ಗೆಳೆಯರಲ್ಲಿಯೇ ಕೈ ಗಡಿಯಾರಗಳ ಮಾರಾಟ ಮಾಡುತ್ತಿದ್ದೇನಾದರೂ,ಗೆಳೆಯರ ಒತ್ತಾಯಕ್ಕೆ ಮಣಿದು ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟ ಮಾಡಿಕೊಳ್ಳುತ್ತಿದ್ದೆ. ಆದರೆ ನಂತರ ನಾನು ಯಶಸ್ವಿ ವ್ಯಾಪಾರಿಯಾದೆ.

ನಂತರ ನಮ್ಮ ಹೇರೂರ ನಲ್ಲಿಯೇ ದಿನಾಂಕ:08-05-1989 ರಂದು ಸೋಮವಾರ ಬಸವ ಜಯಂತಿಯಂದು ಮೆಡಿಕಲ್ ಶಾಪ್ ಆರಂಭಿಸಿದೆ.

ಸಾಹಿತೆಯಾದೆ,ಪ್ರಕಾಶಕನಾದೆ,ಪತ್ರಕರ್ತನಾದೆ,ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ತುಗಳ ಅಧ್ಯಕ್ಷನಾದೆ,ನ್ಯಾಯವಾದಿಯಾದೆ ಆದರೆ ಜನ ನನ್ನನ್ನು ಗುರುತಿಸುವುದು ಮಾತ್ರ ಔಷಧ ವ್ಯಾಪಾರಿಗಳ ಅಧ್ಯಕ್ಷ ಎಂದೇ !

ಆರಂಭದಲ್ಲಿ ನೂರೆಂಟು ವಿಗ್ನ್ ಗಳು.ತನ್ನನ್ನು ಕೇಳಿಲ್ಲ ಎಂದು ಊರಿನ ಪಂಚಾಯತಿಯ ಪ್ರಧಾನ, ಪ್ರಾರಂಭದ ದಿನವೇ ಅಂಗಡಿಗೆ ಬೀಗ ಹಾಕಿಸಿದ್ದ.ಆಗಿನ ಕನಕಗಿರಿ ಶಾಸಕ ಶ್ರೀ ಶ್ರೀರಂಗದೇವರಾಯಲು ಅವರ ಸಹಾಯದಿಂದ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಆಗ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಶ್ರೀ ಮೂಳ ಸಾವಳಗಿಯವರನ್ನು (ಈಗ ಡಿ.ಎಸ್.ಪಿ.ಯಾಗಿ ನಿವೃತ್ತರಾಗಿದ್ದಾರೆ) ಬೆನ್ನು ಹತ್ತಿ ಅಂಗಡಿಯ ಬೀಗ ತೆಗೆಸಿ, ಅಂಗಡಿಯ ಪೂಜೆ ನೆರವೇರಿಸಬೇಕಾಯ್ತು.

ನಂತರ ಗಂಗಾವತಿಯಲ್ಲಿ ಶ್ರೀ ವೀರಭದ್ರ ಎಂಟರ್ ಪ್ರೈಸಸ್ ಹೆಸರಿನಲ್ಲಿ ಹೋಲ್ ಸೇಲ್ ಔಷಧ ವ್ಯಾಪಾರ ಹಾಗೂ ಹುಬ್ಬಳ್ಳಿಯಲ್ಲಿ ಸೂಪರ್ ಸ್ಟಾಕಿಸ್ಟ ಮೂಲಕ ಔಷಧ ವ್ಯಾಪಾರದಲ್ಲಿಯೇ ಮುಂದುವರೆದು ಬಂದದ್ದಾಯ್ತು.ಮತ್ತೇ ಅದೇ ಕತೆ;ತಂದೆ-ತಾಯಿ ಅವರನ್ನು, ಹುಟ್ಟಿದ ಊರನ್ನು ನೆನೆಸಿಕೊಂಡು ಹುಬ್ಬಳ್ಳಿ ಬಿಟ್ಟು ಬಂದು,ಗಂಗಾವತಿಯ ನಿವಾಸಿಯಾಗಿ ಉಳಿದು ಬಿಟ್ಟಿದ್ದೇನೆ.

ಡಿಸೆಂಬರ್‌-೦7-1993 ರಲ್ಲಿ ಸಂಧ್ಯಾ ಪಾರ್ವತಿ ನನ್ನನ್ನು ವರಿಸಿದ ನಂತರ ಬಿ.ಎ.,ಎಲ್.ಎಲ್.ಬಿ., ಅಭ್ಯಾಸ ಮಾಡಿದ್ದಾಳೆ.

ಮಗ ಡಾ.ಅಭಿಷೇಕ ಸ್ವಾಮಿ ದಿನಾಂಕ:01-10-1994 ರಲ್ಲಿ ಜನಿಸಿದ್ದರೆ,ಮಗಳು ಡಾ.ಅಭಿಲಾಷಾ ದಿನಾಂಕ:22-09-1996 ರಲ್ಲಿ ಜನಿಸಿದ್ದಾಳೆ.

ಇಬ್ಬರು ಮಕ್ಕಳು ಜನಿಸಿದ ನಂತರವೇ ನಾನು ಮತ್ತು ನನ್ನ ಪತ್ನಿ ಉನ್ನತ ಶಿಕ್ಷಣ ಪಡೆದದ್ದು.

ವ್ಯಾಪಾರ-ವಹಿವಾಟು,ರಾಜಕೀಯ,ಸಾರ್ವಜನಿಕ ಕೆಲಸಗಳ ಮಧ್ಯೆಯೂ ನಾನು 2005 ರಲ್ಲಿ ಎಮ್.ಎ.(ರಾಜಕೀಯ ಶಾಸ್ತ್ರ) ಪದವಿ ಪಡೆದಿದ್ದೇನೆ.

2006 ರಲ್ಲಿ ಪುಣೆಯಲ್ಲಿ ‘ಡ್ರಗ್ಸ್ ಲಾ’ ದಲ್ಲಿ ಡಿಪ್ಲೊಮಾ ಅಭ್ಯಾಸ ಮಾಡಿದ್ದೇನೆ.

2004 ರಲ್ಲಿ ಗಂಗಾವತಿ ವಿಧಾನ ಸಭಾ ಕ್ಷೇತ್ರಕ್ಕೆ ಜನತಾ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದೆ.

2009 ರಲ್ಲಿ ಬಳ್ಳಾರಿಯಲ್ಲಿ ಎಲ್.ಎಲ್.ಎಲ್.ಬಿ.ಪದವಿ ಗಳಿಸಿದ್ದೇನೆ.

2012 ರಲ್ಲಿ ಈಶಾನ್ಯ ಪದವೀಧರರ ಮತ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಪದವೀಧರ ಕ್ಷೇತ್ರದಿಂದ ಸ್ಪರ್ದಿಸಿದ್ದೆ.

ಮನೆ-ಊರು ಬಿಟ್ಟಿರಲಾರದೆ ಓದುವುದನ್ನು ಬಿಟ್ಟು ಬಂದ ನಾನು, ಹೇರೂರ ಗ್ರಾಮಕ್ಕೆ ಗಂಗಾವತಿ, ಕೇವಲ 6 ಕಿ.ಮಿ. ಅಂತರ ವಿದ್ದರೂ ಕಳೆದ 30 ವರ್ಷಗಳಿಂದ ಊರಿಗೆ ಹೋಗಿ ಇರಲು ಆಗಿಲ್ಲ.ತಂದೆ-ತಾಯಿಯ ಜೊತೆಗೆ ಹೆಚ್ಚಿನ ಕಾಲ ಕಳೆಯಲಾಗಿಲ್ಲ.ಯಾವ ಊರನ್ನು ನೆನೆಸಿಕೊಂಡು, ಇಲ್ಲದ ನೆಪ ಹೇಳಿ ಓದುವುದನ್ನು ಬಿಟ್ಟು ಬರುತ್ತಿದ್ದೆನೋ, ಈಗ ಅದೇ ಊರಿನ 70% ಜನ ಅಪರಿಚಿತರು.ಇದೇ ವಿಪರ್ಯಾಸ.

2001 ರಿಂದ ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ, ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ, ಕರ್ನಾಟಕ ರಾಜ್ಯ ಔಷಧ ತಜ್ಞರ ಸಂಘ ಮತ್ತು ಇತರ ಸಂಘಗಳ ಅಧ್ಯಕ್ಷನಾಗಿ, ರಾಜ್ಯ ಔಷಧ ವ್ಯಾಪಾರಿಗಳ ಮತ್ತು ವಿತರಕ ಸಂಘದ ಉಪಾಧ್ಯಕ್ಷನಾಗಿ,ಔಷಧೀಯ ವಾರ್ತೆ ಮಾಸ ಪತ್ರಿಕೆಯ ಸಂಪಾದಕನಾಗಿ ಅಲ್ಲದೆ ಹಲವು ಇತರ ಹತ್ತಾರು ಸಂಘ-ಸಂಸ್ಥೆಗಳ ಪದಾಧಿಕಾರಿಯಾಗಿ,ನ್ಯಾಯವಾದಿಯಾಗಿ, ಬಿಡುವಿಲ್ಲದ ಸಮಯದಲ್ಲಿಯೂ ಬರವಣೆಗೆಯನ್ನು ಬಿಡದೆ,ಕಾರ್ಯ ನಿರ್ವಹಿಸುತ್ತಿರುವ ನನಗೆ ಮನೆ ಮತ್ತು ಸಂಸಾರದ ಕಡೆ ಗಮನ ಕೊಡಲು ಆಗಿಯೇ ಇಲ್ಲ.

ವ್ಯಾಪಾರ-ವ್ಯವಹಾರ,ಮನೆ-ಮಕ್ಕಳು,ಎಲ್ಲಾ ಆಗು-ಹೋಗುಗಳು,ಕೆಲಸ ಕಾರ್ಯಗಳು ನನ್ನ ಶ್ರೀಮತಿ ಸಂಧ್ಯಾ ಪಾರ್ವತಿಗೆ ಬಿಟ್ಟಂತಹವು.ಆಕೆಯ ಸಹನೆ-ತಾಳ್ಮೆಯಿಂದ ಎಲ್ಲವೂ ಸರಳವಾಗಿ ನಡೆಯುತ್ತಿವೆ.ಕೃತಜ್ಞತೆಗಳನ್ನು ನಾನು ಮೊದಲು ಆಕೆಗೆ ಹೇಳಬೇಕು.

ಈಗ ನನಗೊಂದು ಮಾರ್ಡನ್ ಮನೆ ಇದೆ.ಆಫ಼ೀಸ್ ಇದೆ,ವ್ಯಾಪಾರ ಇದೆ.ಐದು ಕಾರ್ ಗಳಿವೆ.ಅದರಲ್ಲೊಂದು ಪ್ರೀಮಿಯರ್ ವೆಹಿಕಲ್ ಎಂದು ಕರೆಯಲಾಗುವ ‘ಆಡಿ’ ಕಾರ್ ಇದೆ.

ನನ್ನ ಸಿಟ್ಟು-ಸೆಡುವು ಸಹಿಸುವ ಹೆಂಡತಿ ಹಾಗೂ ಶ್ರೇಯಸ್ಸು ತಂದು ಕೊಟ್ಟ ಮಕ್ಕಳಿದ್ದಾರೆ. ಡೈನಾಮಿಕ್ ಪರ್ಸನಾಲಿಟಿ ಎಂಬ ಹೆಸರಿದೆ.ನನ್ನ ಗೆಳೆಯರು,ನನಗಿಂತ ಹಿರಿಯರು ‘ಸರ್’ ಎಂದು ಕರೆದು ಗೌರವ ನೀಡುತ್ತಿದ್ದಾರೆ ! ಸಾಧನೆಗೆ ಇನ್ನೇನು ಬೇಕು ? 

ಏನು ಓದಿದರೇನು ? ದುಡಿಯುವ ಛಲ,ಕುಗ್ಗದ ಮನಸ್ಸು, ಧೈರ್ಯದ ಬದುಕು,ಹಂಗಿಲ್ಲದ ಜೀವನ ಇದ್ದರೆ ಸಾಕಲ್ಲವೇ?

‘ನಮಗ್ಯಾಕ ಬೇಕು ಹುಬ್ಬಳ್ಳಿ-ಧಾರವಾಡ ನಮ್ಮೂರ ನಮ್ಗ್ ಪಾಡ’ ಎಂದು ಹಾಡಿದ ಸಾವಿರ ಹಾಡುಗಳ ಸರದಾರ ಶ್ರೀ ಬಾಳಪ್ಪ ಹುಕ್ಕೇರಿ ಅವರ ಕಾವ್ಯದಂತೆ ಹುಬ್ಬಳ್ಳಿ ಬಿಟ್ಟು ಬಂದ ನಾನು ಮಕ್ಕಳ ಅಭ್ಯಾಸದ ಸಲುವಾಗಿ ಗಂಗಾವತಿ ಸೇರಿಕೊಂಡು 30 ವರ್ಷದ ಮೇಲಾಯ್ತು. 

ತಂದೆ-ತಾಯಿ,ಸ್ವಂತ ಊರನ್ನು ಬಿಟ್ಟು ಬರಬಾರದು ಎಂದು ಹಲವು ಕತೆ,ಕಾವ್ಯ,ಮಾತುಗಳಲ್ಲಿ ಹೇಳಲಾಗಿದ್ದರೂ, ಮಕ್ಕಳಿಗಾಗಿ ಈ ತ್ಯಾಗ ಮಾಡಲೇ ಬೇಕಾದ ಅನಿವಾರ್ಯತೆ ಇತ್ತು.ಈಗಿನಂತೆ ಆಗ ಸ್ಕೂಲ್ ಬಸ್ ಗಳಿರಲಿಲ್ಲ.

ಅದಾಗಲೇ ಸ್ವಂತ ಮೊಪೆಡ್,ಬೈಕ್ ಮತ್ತು ಸುಜುಕಿ (ಮಾರುತಿ) ಕಾರ್ ಇದ್ದರೂ,ಸಮಯ ಪಾಲನೆ ಮಾಡಬೇಕಾದ ಔಷಧ ವ್ಯವಹಾರದ ಜಂಜಾಟದಲ್ಲಿ ಮಕ್ಕಳನ್ನು ಸ್ವಂತ ವಾಹನಗಳಲ್ಲಿ ಕಳಿಸುವುದು-ಕರೆದುಕೊಂಡು ಬರುವುದು ಕಷ್ಟದ ಕೆಲಸವಾಗಿತ್ತು.

ನಮ್ಮ ಈ ತ್ಯಾಗ ನಮಗೆ ಖಂಡಿತ ಫ಼ಲ ಕೊಟ್ಟಿದೆ. ಮಕ್ಕಳಿಬ್ಬರೂ ಉನ್ನತ ಶಿಕ್ಷಣ ಪಡೆಯಲು ಇದರಿಂದ ಸಹಾಯವಾಯಿತು ಎಂಬ ಆತ್ಮ ತೃಪ್ತಿ ಇದೆ.

ನನ್ನ ಮಗ ಡಾ.ಅಭಿಷೇಕ ಸ್ವಾಮಿ,ಮಂಗಳೂರು ಜಿಲ್ಲೆಯ ವಿಟ್ಲ ತಾಲೂಕಿನ ಶ್ರೀ ಸತ್ಯ ಸಾಯಿ ಬಾಬಾ ಕಾಲೇಜ್ ನಲ್ಲಿ ಪಿ.ಯು.ಸಿ., ಅಭ್ಯಾಸ ಮಾಡಿದ್ದು, ಮೈಸೂರಿನ ಸರಕಾರಿ ಮೆಡಿಕಲ್ ಕಾಲೇಜ್ ನಲ್ಲಿ ಎಮ್.ಬಿ.ಬಿ.ಎಸ್.ಅಭ್ಯಾಸ ಮಾಡಿ,ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಎಮ್.ಡಿ.(ಜನರಲ್ ಮೆಡಿಸಿನ್) ಅಭ್ಯಾಸ ಮಾಡುತ್ತಿದ್ದಾನೆ.

ಮಗಳು ಡಾ.ಅಭಿಲಾಷಾ ಮೂಡಬಿದ್ರೆಯ ಆಳ್ವಾಸ್ ಕಾಲೇಜ್ ನಲ್ಲಿ ಪಿ.ಯು.ಸಿ.ಅಭ್ಯಾಸ ಮುಗಿಸಿದ್ದು, ಬಿ.ಡಿ.ಎಸ್.(ದಂತ ವೈದ್ಯಕೀಯ ವಿಜ್ಞಾನ) ಅಭ್ಯಾಸವನ್ನು ಬಳ್ಳಾರಿಯ ವಿಜಯನಗರ ಕಾಲೇಜ್ ನಲ್ಲಿ ಅಭ್ಯಾಸ ಮಾಡಿ,ಎಮ್.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ಎಮ್.ಡಿ.ಎಸ್.(ಓ.ಎಮ್.ಎಫ಼್.ಎಸ್.) ವಿಭಾಗದಲ್ಲಿ ಈಗ ಅಭ್ಯಾಸ ಮಾಡುತ್ತಿದ್ದಾಳೆ.

ಇಬ್ಬರೂ ಅಂತಿಮ ವರ್ಷದಲ್ಲಿದ್ದು ,ಜಾಣ ಮತ್ತು ಒಳ್ಳೆಯ ವಿಧ್ಯಾರ್ಥಿಗಳು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ನಾನು ‘ಅಶೋಕಸ್ವಾಮಿ ಹೇರೂರ ಅವರ ತಂದೆ’ ಎಂದು ನನ್ನ ತಂದೆ ತಮ್ಮನ್ನು ಪರಿಚಯಸಿಕೊಳ್ಳುತ್ತಿದ್ದರು.ಈಗ ಡಾ.ಅಭಿಷೇಕ ಸ್ವಾಮಿ ಮತ್ತು ಡಾ.ಅಭಿಲಾಷಾ ಅವರ ತಂದೆ ಎಂದು ನಾನು ಗುರುತಿಸಿಕೊಳ್ಳುತ್ತಿದ್ದೇನೆ.ಸ್ವಂತ ಊರು ಬಿಟ್ಟು ಬಂದ ತ್ಯಾಗ ಈಗ ಫ಼ಲ ಕೊಟ್ಟಿದೆಯಾದರೂ ನನ್ನೂರನ್ನು ನಾನು ಬಿಟ್ಟು ಕೊಡಲಾರೆ.ನಾನು ಹೇರೂರ ನವನಾಗಿಯೇ ಉಳಿಯ ಬಯಸುತ್ತೇನೆ.

ಬೇಬಿ ಕ್ಲಾಸ್ ನಿಂದ ಗಂಗಾವತಿಯ ಜಯನಗರದ ಸೇ೦ಟ್ ಫ಼ಾಲ್ಸ್ ಶಾಲೆಯಲ್ಲಿ ಓದಿದ ನಮ್ಮ ಮಕ್ಕಳು,4,5 ನೇ ಕ್ಲಾಸ್ ನಿಂದ ಹೊಸಹಳ್ಳಿ ರಸ್ತೆಯ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಓದಿದ್ದಾರೆ.

ಈ ಅನುಭವದ ನುಡಿಗಳನ್ನು ಬರೆಯಲು ಈ ಲಿಟಲ್ ಹಾರ್ಟ್ಸ್ ಶಾಲೆಯೇ ಮುಖ್ಯ ಕಾರಣ.ಅದರಲ್ಲೂ ಭಾರತ ರತ್ನ ಸರ್.ಎಮ್.ವಿ.ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ಶ್ರೀ ಜಗನ್ನಾಥ ಆಲಂಪಲ್ಲಿ ಮತ್ತು ಲಿಟಲ್ ಹಾರ್ಟ್ಸ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪ್ರಿಯಾಕುಮಾರಿ.,ಪ್ರಮುಖರು.

ಈ ಲಿಟಲ್ ಹಾರ್ಟ್ಸ್ ಶಾಲೆ, ತನ್ನ 20 ನೇ ವಾರ್ಷಿಕೋತ್ಸವ ಮತ್ತು ಕರ್ನಾಟಕ ಸಂಭ್ರಮ-50 ರ  ಅಂಗವಾಗಿ ನವೆಂಬರ್ -30-2023 ರಂದು  2 ನೇ ‘ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ’ ಹಮ್ಮಿಕೊಂಡಿತ್ತು.ಈ ಸಮ್ಮೇಳನದ ಸರ್ವಾಧ್ಯಕ್ಷನನ್ನಾಗಿ ನಮ್ಮ ಮಗ ಡಾ.ಅಭಿಷೇಕ ಸ್ವಾಮಿಯನ್ನು ಆಯ್ಕೆ ಮಾಡಿದ್ದು ಮತ್ತು ಅದ್ದೂರಿಯಾಗಿ ಸಮ್ಮೇಳವನ್ನು ಆಚರಣೆ ಮಾಡಿದ್ದು, ಈ ಲೇಖನಕ್ಕೆ ಪ್ರೇರಣೆ.

ಅದಕ್ಕಾಗಿ ಇದನ್ನೆಲ್ಲಾ ಬರೆಯ ಬೇಕಾಯ್ತು.ಮೇಲೆ ಹೇಳಿದಂತೆ,ನನ್ನ ಓದು,ನನ್ನ ಶ್ರೀಮತಿಯ ಓದು, ರಾಜಕೀಯ,ಚುನಾವಣೆ,ಸಾರ್ವಜನಿಕ ಜೀವನದ ಜಂಜಾಟದಲ್ಲಿ ಹೈಸ್ಕೂಲ್ ಅಭ್ಯಾಸದವರೆಗೂ ನಮ್ಮ ಮಕ್ಕಳು ಯಾವ ತರಗತಿಯಲ್ಲಿ ಓದುತ್ತಿದ್ದಾರೆಂದು ನನಗೆ ಸರಿಯಾಗಿ ಗೊತ್ತಿರಲಿಲ್ಲ.ಅವರ ಓದಿನ ಓಟದಲ್ಲಿ ನನ್ನ ಪಾತ್ರ ಎಳ್ಳಷ್ಟು ಇಲ್ಲ.

ಇದನ್ನೇ ಓದಬೇಕು ! ಇದನ್ನೇ ಮಾಡಬೇಕು ! ಎಂದು ಪಾಲಕರು ಮಕ್ಕಳಿಗೆ ಕಡ್ಡಾಯ ಮಾಡುವುದು ಮಹಾ ಅಪರಾಧ.ಇದಕ್ಕೆ ನಾನೇ ಸ್ವತಃ ಉದಾಹರಣೆ.ಅದಕ್ಕಾಗಿ ಪಾಲಕರು ಅಭ್ಯಾಸ ಮತ್ತು ವಿಷಯಗಳ ಆಯ್ಕೆಯನ್ನು ಅವರಿಗೆ ಬಿಟ್ಟು ಬಿಡಿ.ಸಾಧಿಸುವವರೂ ಎಲ್ಲಿಯಾದರೂ ಸಾಧಿಸುತ್ತಾರೆ.

ಹೀಗಾಗಿ ನಮ್ಮ ಮಕ್ಕಳು ಶಿಕ್ಷಣದಲ್ಲಿ ಏನೇ ಸಾಧಿಸಿದ್ದರೂ ಅದಕ್ಕೆ ಆಯಾ ಶಾಲೆಯ ಗುರು ವೃಂದವೇ ಕಾರಣ.ನಮ್ಮ ಮಕ್ಕಳ ಸಾಧನೆಯ ಕೀರ್ತಿ ಶಿಕ್ಷಕರಿಗೆ ಸಲ್ಲಲಿ ಎಂದು ಮನಸಾರೆ ಬಯಸುತ್ತೇನೆ.

-ಅಶೋಕಸ್ವಾಮಿ ಹೇರೂರ.

Leave a Reply

Your email address will not be published. Required fields are marked *