ಮಕ್ಕಳ ಕನ್ನಡ ೨ ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಅಭಿಷೇಕ ಸ್ವಾಮಿ ಹೇರೂರ ಅವರ ಪ್ರಾಸ್ತಾವಿಕ ನುಡಿಗಳು
ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇರೂರ ಗ್ರಾಮದ ಅಂಗಡಿ ಅಭಿಷೇಕಸ್ವಾಮಿಯಾದ ನಾನು,ಅಶೋಕಸ್ವಾಮಿ ಮತ್ತು ಸಂಧ್ಯಾಪಾರ್ವತಿ ಅವರ ಮಗನಾಗಿದ್ದು ಬೆಂಗಳೂರು ನಗರದ ಡಾ.ಬಿ.ಅರ್. ಅಂಬೇಡ್ಕರ್ ಮೆಡಿಕಲ್ ಕಾಲೇಜ್ ನಲ್ಲಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ.
ನಮ್ಮ ಅಜ್ಜ ದಿವಂಗತ ಶ್ರೀ ವೀರಭದ್ರಯ್ಯ ಸ್ವಾಮಿ,ಅಜ್ಜಿ ನೀಲಮ್ಮ ಅವರೊಂದಿಗೆ ಶಾಲಾ ರಜೆಗಳಲ್ಲಿ ಅವರೊಂದಿಗೆ ಬೆಳೆದಿದ್ದೇನೆ.ಅಜ್ಜ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು, ತಂದೆಯವರಾದ ಅಶೋಕಸ್ವಾಮಿ ಹೇರೂರ ಡಿಪ್ಲೊಮಾ ಇನ್ ಫ಼ಾರ್ಮಸಿ ಅಭ್ಯಾಸ ಮಾಡಿ,ನಮ್ಮ ಸ್ವಂತ ಊರಾದ ಹೇರೂರ ನಲ್ಲಿ ಶ್ರೀ ವೀರಭದ್ರೇಶ್ವರ ಮೆಡಿಕಲ್ ಸ್ಟೊರ್ಸ್ ಆರಂಭಿಸಿ,ವೃತ್ತಿ ಜೀವನ ಆರಂಭಿಸಿದರು.
ನಮ್ಮನ್ನು ಶಾಲೆಗೆ ಪ್ರವೇಶ ಕೊಡಿಸಲೆಂದೇ,ನಮ್ಮ ಪಾಲಕರು ಗಂಗಾವತಿ ನಗರದಲ್ಲಿ ವಾಸ್ತವ್ಯ ಹೂಡಿ, ಗಂಗಾವತಿ ನಗರದಲ್ಲಿ ಶ್ರೀ ವೀರಭದ್ರ ಎಂಟರ್ ಪ್ರೈಸಸ್ ಹೆಸರಿನಲ್ಲಿ ಔಷಧ ವಿತರಣಾ ಸಂಸ್ಥೆ ಆರಂಭಿಸಿ, ವೃತ್ತಿಯ ಜೊತೆಯಲ್ಲಿ ನಮ್ಮ ತಂದೆಯವರು ಎಮ್.ಎ.(ಪೊಲಿಟಿಕಲ್ ಸೈನ್ಸ್),ಡಿಪ್ಲೊಮಾ ಇನ್ ಡ್ರಗ್ಸ್ ಲಾ ಮತ್ತು ಎಲ್.ಎಲ್.ಬಿ.ಅಭ್ಯಾಸ ಮಾಡಿದ್ದಾರೆ.
ತಾಯಿ ಶ್ರೀಮತಿ ಸಂಧ್ಯಾಪಾರ್ವತಿ ಮನೆಗೆಲಸ ಮತ್ತು ನಮ್ಮ ಲಾಲನೆ- ಪಾಲನೆಯ ಜೊತೆಗೆ ಪಿ.ಯು.ಸಿ., ಬಿ.ಎ.,ಮತ್ತು ಎಲ್.ಎಲ್.ಬಿ.ಅಭ್ಯಾಸ ಮಾಡಿದ್ದಾರೆ.
ನನ್ನ ತಂಗಿ ಡಾ.ಅಭಿಲಾಷಾ ಇದೇ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅಭ್ಯಾಸ ಮಾಡಿದ್ದು, ಬಳ್ಳಾರಿ ವಿಜಯನಗರ ಡೆ೦ಟಲ್ ಕಾಲೇಜ್ ನಲ್ಲಿ ಬಿ.ಡಿ.ಎಸ್.ಅಭ್ಯಾಸ ಮಾಡಿ, ಸಧ್ಯ ಬೆಂಗಳೂರಿನ ಎಮ್.ಎಸ್.ರಾಮಯ್ಯ ಮೆಡಿಕಲ್ ಕಾಲೇಜ್ ನಲ್ಲಿ ಎಮ್.ಡಿ.ಎಸ್.,(ಓ.ಎಮ್.ಎಫ಼್.ಎಸ್.) ವಿಭಾಗದಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಳೆ.
ನಾನು ಬೇಬಿ ಕ್ಲಾಸ್ ನಿಂದ 4 ನೇ ಕ್ಲಾಸ್ ವರೆಗಿನ ಶಿಕ್ಷಣವನ್ನು ಇದೇ ನಗರದ ಸೇ೦ಟ್ ಫ಼ಾಲ್ಸ್ ಶಾಲೆಯಲ್ಲಿ ಅಭ್ಯಾಸ ಮಾಡಿ,5 ನೇ ಕ್ಲಾಸ್ ನಿಂದ ಹತ್ತನೇ ತರಗತಿಯವರೆಗೆ ಈ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಓದು ಮುಗಿಸಿದ್ದೇನೆ.
ಪಿ.ಯು.ಸಿ.ಶಿಕ್ಷಣವನ್ನು ಮಂಗಳೂರು ಜಿಲ್ಲೆಯ ವಿಟ್ಲ ತಾಲೂಕಿನ ಶ್ರೀ ಸತ್ಯ ಸಾಯಿ ಲೋಕ ಸೇವಾ ಸಂಸ್ಥೆ ಗ್ರಾಮ ಅಳಿಕೆ ಇಲ್ಲಿ ಮುಗಿಸಿ,ಮೈಸೂರು ನಗರದ ‘ಮೈಸೂರು ಮೆಡಿಕಲ್ ಕಾಲೇಜ್’ ನಲ್ಲಿ ಎಮ್.ಬಿ.ಬಿ.ಎಸ್.ಅಭ್ಯಾಸ ಮಾಡಿದ್ದೇನೆ.
ಈ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಓದಿದ್ದು, ಮರೆಯಲಾರದ ಅನುಭವವನ್ನು ನೀಡಿದೆ.ಶಾಲೆಯ ಕಾರ್ಯದರ್ಶಿ ಶ್ರೀ ಜಗನಾಥ ಆಲಂಪಲ್ಲಿ ಮತ್ತು ಹಾಗೂ ಮುಖ್ಯೊಪಾಧ್ಯಯರಾದ ಶ್ರೀಮತಿ ಪ್ರಿಯಾ ಕುಮಾರಿ ಹಾಗೂ ಇತರ ಶಿಕ್ಷಕರು ಎಸ್.ಎಸ್.ಎಲ್.ಸಿ.ಪರಿಕ್ಷಾ ಸಮಯದಲ್ಲಿ ಬೆಳಿಗ್ಗೆ ಮನೆ ಮನೆಗೆ ಬಂದು ವಿಧ್ಯಾರ್ಥಿಗಳನ್ನು ಎಬ್ಬಿಸಿ, ಓದಲು ಪ್ರೇರೆಪಿಸಿದ್ದರು.
ಅವರ ವಿಧ್ಯಾರ್ಥಿಗಳಾದ ನಾವು ಉನ್ನತ ಶಿಕ್ಷಣ ಪಡೆಯಲು ಅವರು ಪ್ರೇರಣೆಯಾಗಿದ್ದಾರೆ. ಜೀವನದುದ್ದಕ್ಕೂ ಈ ಶಾಲೆಯನ್ನು ,ಶಾಲಾ ಶಿಕ್ಷಕರನ್ನು ಮತ್ತು ಸಿಬ್ಬಂದಿಯನ್ನು ಮರೆಯುವಂತಿಲ್ಲ.ಅವರು ಕಷ್ಟ ಸಾಧ್ಯವಾದ ಕಾರ್ಯಗಳನ್ನು ಮಾಡಿದ್ದರಿಂದ, ನಮ್ಮ ಶೈಕ್ಷಣಿಕ ಬೆಳವಣಿಗೆಗೆ ನಾಂದಿಯಾಯಿತು.
ಈ ನಮ್ಮ ಶಾಲೆಯಲ್ಲಿ ಪಾಠ ಮಾತ್ರವಲ್ಲ ,ಆಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ನಮ್ಮನ್ನು ಉತ್ಸಾಹ ಶಾಲಿಗಳನ್ನಾಗಿ ಮಾಡಿದ್ದಾರೆ. ಹೀಗಾಗಿ ನಾನು ಮತ್ತು ನನ್ನ ಸಹಪಾಠಿಗಳು ಕ್ರಿಕೆಟ್, ವಾಲಿ ಬಾಲ್,ಆಟಗಳಲ್ಲಿ ಆಸಕ್ತಿ ಹೊಂದಿದ್ದೇವೆ.ಭಜನೆ ಮಾಡುವುದು ಸಹ ನನ್ನ ಆಸಕ್ತಿಯ ಚಟುವಟಿಕೆಯಲ್ಲೊಂದಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿಧ್ಯಾರ್ಥಿಗಳ ಜೊತೆಗಿನ ಒಡನಾಟ ಇನ್ನೂ ಹಸಿರಾಗಿರುವುದರಿಂದ, ನಮ್ಮ ಶಾಲೆಯಲ್ಲಿನ ವಿಧ್ಯಾರ್ಥಿ ಜೀವನವನ್ನು ಮರೆಯಲು ಸಾಧ್ಯವಿಲ್ಲ.ಅದೊಂದು ಅವಿನಾಭಾವ ಸಂಬಂಧ.
ನಮ್ಮ ಶಾಲೆಯಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ಕಾಲ ಕಾಲಕ್ಕೆ ನಡೆಸಿರುವುದರಿಂದ,ವಿಧ್ಯಾರ್ಥಿಗಳು ಸಾಹಿತ್ಯದ ಕಡೆ ಒಲವು ತೋರಿಸಲು ಸಾಧ್ಯವಾಗಿದೆ.ಎಲ್ಲರೂ ಸಾಹಿತಿಗಳಾಗಲು ಸಾಧ್ಯವಾಗದಿದ್ದರೂ ಸಾಹಿತ್ಯಾಸಕ್ತಿ ಎಲ್ಲಾ ವಿದ್ಯಾರ್ಥಿಗಳಲ್ಲಿದೆ.ಇದು ನಮ್ಮ ಶಾಲೆಗೆ ಮತ್ತು ನಮಗೆ ಹೆಮ್ಮೆಯ ವಿಷಯ.
‘ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ’ ಒಂದು ವಿಶಿಷ್ಟ ಕಾರ್ಯಕ್ರಮ.ಇದೊಂದು ಹೊಸ ಪ್ರಯತ್ನ.ಕನ್ನಡ ಭಾಷೆ, ಬರಹಗಳಲ್ಲಿ ಉತ್ಸಾಹ ಕಡಿಮೆಯಾಗುತ್ತಿರುವ ಇಂದಿನ ಆಧುನಿಕ ಭರಾಟೆಯಲ್ಲಿ ವಿಭಿನ್ನ ರೀತಿಯ ಸಾಹಿತ್ಯ ಸಮ್ಮೇಳನವನ್ನು ಈ ನಮ್ಮ ಶಾಲೆಯಲ್ಲಿ ಎರಡನೇ ಬಾರಿ ಹಮ್ಮಿಕೊಂಡಿರುವುದು ಸ್ವಾಗತವಾದದ್ದು ಮತ್ತು ಶ್ಲಾಘನೀಯವಾದದ್ದು.
ಶಾಲಾ ಮಟ್ಟದಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು,ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಹುಟ್ಟಲು ಕಾರಣವಾಗುತ್ತದೆ.ಇದರಿಂದ ಕನ್ನಡ ಉಳಿಯುತ್ತದೆ,ಬೆಳೆಯುತ್ತದೆ.ಇಂತಹ ಪ್ರಯತ್ನಗಳು ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಡೆಯಬೇಕು. ವಿಧ್ಯಾರ್ಥಿಗಳಲ್ಲಿ ,ಹಳೇ ವಿಧ್ಯಾರ್ಥಿಗಳಲ್ಲಿ ಭಾಂದವ್ಯ ಬೆಸೆಯಲು ಇದು ಪ್ರಮುಖ ಕೊಂಡಿಯಾಗುತ್ತದೆ.
ಇಂತಹ ಅದ್ಭುತ, ಅಸ್ಮರಣೀಯ ಸಮ್ಮೇಳನ ನಡೆಯಲು ಉತ್ಸಾಹ ತೋರಿಸಿದ ಶಾಲೆಯ ಮುದ್ದು ಮಕ್ಕಳ ಕ್ರೀಯಾಶೀಲತೆ ಅಪಾರವಾದದ್ದು.ಅರಿಯದ ಮಕ್ಕಳು ಕೂಡ ಸಮ್ಮೇಳನವನ್ನು ಜಾತ್ರೆಯಂತೆ ಸಂಭ್ರಮಿಸುತ್ತಿರುವುದನ್ನು ಕಂಡು ಆನಂದವಾಗುತ್ತಿದೆ.
ಶಾಲೆಯ ಎರಡನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಾನು ವಹಿಸುತ್ತಿರುವುದು ತುಂಬಾ ಸಂತೋಷವನ್ನು೦ಟು ಮಾಡಿದೆ.ನನ್ನ ಜೀವನದ ಅತ್ಯಂತ ಸ್ಮರಣೀಯ ಕಾರ್ಯಕ್ರಮ ಇದು.ಎಲ್ಲಾ ಪ್ರಶಸ್ತಿಗಳಿಗೂ ಮೀರಿದ ಗೌರವ ಇದಾಗಿದೆ.ಕಾರಣ ನಾನು ನನ್ನ ಗುರುಗಳಿಗೆ, ಶಾಲಾ ಆಡಳಿತ ಮಂಡಳಿಯವರಿಗೆ ಋಣಿಯಾಗಿದ್ದೇನೆ.
ನಾನು ಏನೇ ಸಾಧನೆ ಮಾಡಿದ್ದರೂ ಅದು ಲಿಟಲ್ ಹಾರ್ಟ್ಸ್ ಶಾಲೆಗೆ ಮತ್ತು ಶಿಕ್ಷಕರಿಗೆ ಸಲ್ಲುತ್ತದೆ.ಈ ಸಮ್ಮೇಳನದ ಕೀರ್ತಿ ಇತರ ಶಾಲಾ ಸಂಸ್ಥೆಗಳಿಗೆ ಮಾದರಿ.ಇದನ್ನು ಅನುಕರಿಸುವುದಕ್ಕಿಂತ, ಆಚರಿಸುವುದು ಮುಖ್ಯ.ಅದಕ್ಕಾಗಿಯೇ ಇದು ಮಾದರಿಯ ಸಮ್ಮೇಳನ ಎಂದು ಹೇಳಲೇ ಬೇಕಾಗುತ್ತದೆ.
ವಾಣಿಜ್ಯೊಧ್ಯಮಿಗಳ ನಗರವಾದ ಮತ್ತು ಭತ್ತದ ಕಣಜವಾದ ಗಂಗಾವತಿ,ಉದ್ಯಮ ಮತ್ತು ವ್ಯಾಪಾರದ ಜೊತೆಗೆ ಶೈಕ್ಷಣಿಕ ನಗರವಾಗುತ್ತಿರುವುದು ಉತ್ತಮ ಬೆಳವಣಿಗೆ.ಇಲ್ಲಿನ ವಿಧ್ಯಾರ್ಥಿಗಳು ಮುಂದಿನ ಅಭ್ಯಾಸಕ್ಕೆ ಬೇರೆ ಬೇರೆ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆ ಈಗ ಇಲ್ಲದಂತಾಗಿದೆ.
ಇಂತಹ ಸಂಧರ್ಭದಲ್ಲಿ ಸ್ಥಳೀಯ ನಾಗರಿಕರು,ಸ್ಥಳೀಯ ಸಂಸ್ಥೆಗಳಲ್ಲಿ ಮಕ್ಕಳಿಗೆ ಅಭ್ಯಾಸ ಕೊಡಿಸುವ ಮೂಲಕ ಸ್ಥಳೀಯ ಸಂಸ್ಥೆಗಳನ್ನು ಬೆಳೆಸಬೇಕೆಂದು ಈ ಸಮ್ಮೇಳನದ ಮೂಲಕ ನಾನು ವಿನಂತಿಸುತ್ತೇನೆ.
ವಾಣಿಜ್ಯೊಧ್ಯಮದ ಜೊತೆಗೆ ಸ್ಥಳೀಯ ಶಿಕ್ಷಣ ಕ್ಷೇತ್ರವೂ ಬೆಳೆಯಬೇಕು.ಅದಕ್ಕಾಗಿ ನಾವೆಲ್ಲರೂ ಕೈ ಜೊಡಿಸುವ ಅವಶ್ಯಕತೆ ಇದೆ.ಎಲ್ಲಾ ರೀತಿಯಲ್ಲೂ ,ಎಲ್ಲಾ ಹಂತದಲ್ಲೂ ಗಂಗಾವತಿ ನಗರ ಮಾತ್ರವಲ್ಲದೆ, ತಾಲೂಕಿನ ಅಭಿವೃದ್ಧಿಯೂ ಆಗಬೇಕು.ಆಗ ಮಾತ್ರ ಇಂತಹ ಸಮ್ಮೇಳನಗಳು ಸಾರ್ಥಕವಾಗುತ್ತವೆ.
ಕಾಲ ಕಾಲಕ್ಕೆ ಇಂತಹ ಕ್ರೀಯಾಶೀಲ ಸಮ್ಮೇಳನಗಳು ನಡೆಯಲಿ, ಇತರರಿಗೂ ಪ್ರೇರಣೆಯಾಗಲಿ ಎಂದು ಹೃದಯ ತುಂಬಿ ಈ ಸಂಧರ್ಭದಲ್ಲಿ ಆಶಿಸುತ್ತೇನೆ ಎಂದು ಸಮ್ಮೇಳನದ ಅಧ್ಯಕ್ಷ ಅಭಿಷೇಕ ಸ್ವಾಮಿ ಹೇರೂರ ಹೇಳಿದರು.