ಬೂದಗುಂಪಾ-ಬಳ್ಳಾರಿ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಲು ಚೇಂಬರ್ ಆಫ್ ಕಾಮರ್ಸ್ ಒತ್ತಾಯ.
ಗಂಗಾವತಿ: ಕೊಪ್ಪಳ ಜಿಲ್ಲೆಯ ಬೂದಗುಂಪಾ ಕ್ರಾಸ್ ನಿಂದ ಗಂಗಾವತಿ-ಬಳ್ಳಾರಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಒತ್ತಾಯಿಸಿದೆ.
ಕೊಪ್ಪಳ ತಾಲೂಕಿನ ಬೂದಗುಂಪಾ ಕ್ರಾಸ್ ನಿಂದ (ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ರಿಂದ) ಗಂಗಾವತಿ-ಕಂಪ್ಲಿ-ಕುಡಿತಿನಿ ಮೂಲಕ (ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 67) ಕ್ಕೆ ಅಥವಾ ಬೂದಗುಂಪಾ ಕ್ರಾಸ್ ನಿಂದ ಕಂಪ್ಲಿ-ಕುರಗೋಡ-ಕೋಳೂರ ಕ್ರಾಸ್ (ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50A) ನವರೆಗೂ ಸಂಪರ್ಕ ಕಲ್ಪಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಬರೆದ ಪತ್ರದಲ್ಲಿ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಕೋರಿದ್ದಾರೆ.
ಪತ್ರದ ಪ್ರತಿಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ,ಕೊಪ್ಪಳ ಸಂಸದರಾದ ಸಗಣ್ಣ ಕರಡಿ,ಬಳ್ಳಾರಿ ಸಂಸದ ವಾಯ್.ದೇವೇಂದ್ರಪ್ಪ ಮತ್ತು ಗಂಗಾವತಿ ಶಾಸಕ ಜಿ.ಜನಾರ್ಧನ ರೆಡ್ಡಿಯವರಿಗೆ ಕಳುಹಿಸಿದ್ದಾರೆ.
ರಾಜ್ಯ ಸರಕಾರ,ಕೇಂದ್ರ ಸರಕಾರಕ್ಕೆ ಈ ಬಗ್ಗೆ ಪ್ರಸ್ಥಾವನೆ ಸಲ್ಲಿಸಿದರೆ ಕೂಡಲೇ ಈ ಕಾರ್ಯ ಆರಂಭಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.