ಟೋಲ್ ಹಣ ಬೇಕು ! ದುರಸ್ತಿ ಬೇಡ ! ಇದು ಹಿಟ್ನಾಳ ಟೋಲ್ ಕಥೆ.
ಕೊಪ್ಪಳ: ರಾಜ್ಯದ ವಿವಿಧ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಹಲವು ಟೋಲ್ ಪ್ಲಾಜಾಗಳು ಅಸ್ತಿತ್ವದಲ್ಲಿವೆ.ಅವುಗಳ ಮುಖ್ಯ ಕೆಲಸ ಟೋಲ್ ಸಂಗ್ರಹಿಸುವುದು ಮಾತ್ರ ಎಂದು ಕೊಂಡಿವೆ.ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ಸೌಲಭ್ಯಗಳನ್ನು ಒದಗಿಸಲು ಅವು ವಿಫ಼ಲವಾಗಿವೆ. ಕನಿಷ್ಠ ಶೌಚಾಲಯದ ಸೌಲಭ್ಯವನ್ನು ಅವು ಒದಗಿಸಿಲ್ಲ. ಶೌಚಾಲಯದ ಕಟ್ಟಡಗಳೇನೋ ಇವೆ.ಆದರೆ ಅವುಗಳು ಬಳಕೆ ಮಾಡುವ ಸ್ಥಿತಿಯಲ್ಲಿ ಇಲ್ಲ.ಕೇಳುವವರು ಇದ್ದರೆ ತಾನೇ ಅವರು ಅವುಗಳನ್ನು ದುರಸ್ತಿ ಮಾಡಿಸಿಯಾರು ! ಆದರೆ ಕೇಳುವವರೇ ಇಲ್ಲ.
ಕೊಪ್ಪಳ ತಾಲೂಕಿನ ಹಿಟ್ನಾಳ ಕ್ರಾಸ್ ಬಳಿ ಇರುವ ಟೋಲ್ ಪ್ಲಾಜಾದ ಕಥೆ ಇದಕ್ಕೊಂದು ತಾಜಾ ಉದಾಹರಣೆ. ಬೂದಗುಂಪಾ ಕ್ರಾಸ್ ನಿಂದ ಕೊಪ್ಪಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಟೋಲ್ ನವರು ಎಲ್ಲಾ ವಾಹನಗಳಿಂದಲೂ ಕರಾರುವಕ್ಕಾಗಿ ಹಣ ಪಡೆಯುತ್ತಾರೆ.ಆದರೆ ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫ಼ಲರಾಗಿದ್ದಾರೆ.
ಈ ರಸ್ತೆಯ ಎರಡೂ ಬದಿಯಲ್ಲಿ ಪ್ರಯಾಣಿಕರಿಗಾಗಿ ಪಾಯಿಖಾನೆಗಳನ್ನು ನಿರ್ಮಿಸಲಾಗಿದೆ.ಅವುಗಳಲ್ಲಿ ನೀರಿನ ಸೌಲಭ್ಯ ಇಲ್ಲ.ನೀರು ಸಂಗ್ರಹಿಸುವ ‘ವಾಟರ್ ಟ್ಯಾಂಕ್’ ಮಾಯವಾಗಿವೆ.ಪಾಯಿಖಾನೆಯ ಮೇಲಿನ ತಗಡುಗಳು ಎಂದೋ ಕಿತ್ತು ಹೋಗಿವೆ.
ಮಲ ವಿಸರ್ಜನೆ ಇರಲಿ,ಮೂತ್ರ ಮಾಡಲು ಅಲ್ಲಿ ಸಾಧ್ಯವಿಲ್ಲ.ಹತ್ತಿರ ಹೋದರೆ ವಿಪರೀತವಾದ ಕೆಟ್ಟ ವಾಸನೆ ಮೂಗಿಗೆ ರಾಚುತ್ತದೆ.ಒಳ ಹೋಗಲು ಸಾಧ್ಯವೇ ಇಲ್ಲ.ಒಳ ಹೋಗುವ ದಾರಿಯಲ್ಲಿಯೇ ಗಿಡ-ಗಂಟೆಗಳು ಬೆಳೆದು ನಿಂತಿವೆ.
ದೂರದ ಸೊಲ್ಲಾಪುರದಿಂದ ಪ್ರಯಾಣಿಕರು ಈ ರಸ್ತೆಯಲ್ಲಿ ತಮ್ಮ ವಾಹನಗಳ ಮೂಲಕ ಸಾಗುತ್ತಾರೆ. ತುರ್ತಾಗಿ ಬಹಿರ್ದೇಶೆಗೆ ಹೋಗ ಬೇಕಾದರೆ ಅವರೇನು ಮಾಡಬೇಕು ? ಯಾರೂ ಪ್ರಶ್ನಿಸುವವರೇ ಇಲ್ಲ.
ಟೋಲ್ ಪಾವತಿ ಮಾಡುವವರಿಗೆ ಶೌಚಾಲಯ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಬೇಕಾದ ಟೋಲ್ ಗುತ್ತಿಗೆದಾರರು,ಯಾವುದೇ ತಂಟೆ ತಕರಾರು ಇಲ್ಲದೆ ಟೋಲ್ ಹಣ ವಸೂಲಿ ಮಾಡುತ್ತಿದ್ದಾರೆ.
ಈ ರಸ್ತೆಯಲ್ಲಿ ಪ್ರತಿ ನಿತ್ಯ ನೂರಾರು ಜನ ಪ್ರತಿನಿಧಿಗಳು ಸಂಚರಿಸುತ್ತಾರೆ,ಅವರ ದೃಷ್ಟಿ ಅದೆಲ್ಲಿ ಇರುತ್ತದೆಯೋ ? ಯಾವ ತಕರಾರು ಇಲ್ಲದೆ ಕಣ್ಣು ಮುಚ್ಚಿ ಅವರೂ ಓಡಾಡುತ್ತಾರೆ.ಕನಿಷ್ಠ ಪ್ರಜ್ಞೆ ಇರುವ ಜನಪ್ರತಿ ಅಥವಾ ಅಧಿಕಾರಿ ಇಲ್ಲಿ ಸಂಚರಿಸುತ್ತಿಲ್ಲವೋ ಏನೋ ? ಎಂಬ ಅನುಮಾನ ಕಾಡುವುದರಲ್ಲಿ ಅನುಮಾನವಿಲ್ಲ.
ಈ ಅವ್ಯವಸ್ಥೆಯನ್ನು ಪರಿಶೀಲಿಸಬೇಕಾದವರು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದವರು.ಅದರ ಕಚೇರಿ ಪಕ್ಕದ ಹೊಸಪೇಟೆ ನಗರದಲ್ಲಿದೆ.ಅವರೂ ಸಹ ಕಣ್ಣು ಮುಚ್ಚಿ ಓಡಾಡುತ್ತಿದ್ದಾರೆ.
ಕೊಪ್ಪಳ ಸಂಸದರು ಹಿಟ್ನಾಳ ಕ್ರಾಸ್ ಬಳಿ ಇರುವ ಮೂರು ಟೋಲ್ ಪ್ಲಾಜಾಗಳನ್ನು ಪರಿಶೀಲಿಸಿ, ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಂಭಂದಿಸಿದವರಿಗೆ ಆದೇಶಿಸಬೇಕು.ಆಗ ಮಾತ್ರ ಪ್ರಯಾಣಿಕರಿಗೆ ಒಂದಿಷ್ಟು ಸೌಲಭ್ಯಗಳು ದೊರಕೀಯಾವು.