ಗಂಗಾವತಿ-ಸೊಲ್ಲಾಪುರ ರೇಲ್ವೆ ಇನ್ನು ಗಗನ ಕುಸುಮ
ಗಂಗಾವತಿ: ಗದಗ ನಗರದವರೆಗೂ ಸಂಚರಿಸುತ್ತಿದ್ದ ಮುಂಬೈ ಮತ್ತು ಸೊಲ್ಲಾಪುರ ರೇಲ್ವೆಗಳನ್ನು ಗಂಗಾವತಿ ನಗರದವರೆಗೂ ವಿಸ್ತರಿಸುವಂತೆ ನೈರುತ್ಯ ವಲಯದ ರೇಲ್ವೆ ಮ್ಯಾನೇಜರ್ ಅವರಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ಪತ್ರ ಬರೆಯುವ ಮೂಲಕ ಒತ್ತಾಯಿಸುತ್ತಾ ಬರಲಾಗಿತ್ತು.ಆದರೆ ಗಂಗಾವತಿಯನ್ನು ಕಡೆಗಾಣಿಸಿ, ಏಕಾಏಕಿ ಗದಗ-ಮುಂಬೈ ಮತ್ತು ಗದಗ-ಸೊಲ್ಲಾಪೂರ ರೇಲ್ವೆಗಳನ್ನು ಹೊಸಪೇಟೆ ನಗರದವರೆಗೂ ವಿಸ್ತರಿಸಲಾಗಿದೆ.
ಇದರಿಂದ ಗಂಗಾವತಿ ನಗರದ ಜನತೆಗೆ ತುಂಬಾ ಅನ್ಯಾಯವಾಗಿದ್ದು, ರೇಲ್ವೆ ಬಳಕೆದಾರರ ಸಮಿತಿಯ ಒತ್ತಾಯದ ಮೇರೆಗೆ ಈ ಬದಲಾವಣೆ ಮಾಡಲಾಗಿದ್ದು , ಕೊಪ್ಪಳ ಜಿಲ್ಲೆಯನ್ನು ಪ್ರತಿನಿಧಿಸುವ ರೇಲ್ವೆ ಬಳಕೆದಾರರ ಸಮಿತಿ ಸದಸ್ಯರ ಮೌನವೇ ಇದಕ್ಕೆ ಕಾರಣವಾಗಿದೆ.
ಕೊಪ್ಪಳದ ಸಂಸದರು ಇತ್ತೀಚೆಗೆ ಸೊಲ್ಲಾಪುರ ರೇಲ್ವೆಯನ್ನು ಗಂಗಾವತಿ ನಗರಕ್ಕೆ ಓಡಿಸುವಂತೆ ರೇಲ್ವೆ ಇಲಾಖೆಗೆ ಮನವಿ ಮಾಡಿದ್ದರೂ ಅದು ಅನುಷ್ಠಾನಕ್ಕೆ ಬರುವ ಸಾಧ್ಯತೆ ತುಂಬಾ ಕಡಿಮೆ ಇದೆ.
ಗಂಗಾವತಿ ಭಾಗದಿಂದ ಸಾಯಿ ದೇವಸ್ಥನಕ್ಕೆ ಹೋಗುವ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿದ್ದು ಅವರಿಗೆ ಸೊಲ್ಲಾಪುರ ರೇಲ್ವೆ ಅನುಕೂಲಕರವಾಗಲಿತ್ತು.ಆದರೆ ಇದೀಗ ಸೊಲ್ಲಾಪುರ ರೇಲ್ವೆ ಸೌಲಭ್ಯ ದೊರೆಯದೇ ಅವರಿಗೆ ನಿರಾಸೆಯಾಗಿದೆ.
ಸಂಸದರ ಒತ್ತಾಯದ ಮೇರೆಗೆ ಸೊಲ್ಲಾಪುರ ರೇಲ್ವೆ ಬದಲಿಗೆ ವಿಜಯಪುರ-ಗಂಗಾವತಿ ನೂತನ ರೇಲ್ವೆ ಆರಂಭಿಸುವ ಭರವಸೆಯನ್ನು ರೇಲ್ವೆ ಇಲಾಖೆ ಸಂಸದರಿಗೆ ನೀಡಿದೆ ಎನ್ನಲಾಗಿದೆ.ಅಷ್ಟಕ್ಕೆ ಗಂಗಾವತಿ ಜನತೆ ಸಮಾದಾನ ಪಟ್ಟುಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ.
ಈ ಭಾಗದಿಂದ ಗೋವಾ ರಾಜ್ಯಕ್ಕೆ ಒಂದೇ ಒಂದು ರೇಲ್ವೆಯ ಸೌಲಭ್ಯವಿದ್ದು ,ಗೋವಾ-ಗಂಗಾವತಿ ರೇಲ್ವೆ ಆರಭಿಸಲು ನಮ್ಮ ಸಂಸ್ಥೆಯಿಂದ ಬಹಳ ವರ್ಷಗಳ ಒತ್ತಾಯವಿದ್ದು ತಾಂತ್ರಿಕ ತೊಂದರೆಗಳನ್ನು ಕೂಡಲೇ ನಿವಾರಿಸಿ, ಗೋವಾ-ಗಂಗಾವತಿ ರೇಲ್ವೆ ಯನ್ನು ಆರಂಭಿಸಬೇಕೆಂದು ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
ಆದರಂತೆ ಕಾರಟಗಿ-ಹುಬ್ಬಳ್ಳಿ ರೇಲ್ವೆಯನ್ನು ಧಾರವಾಡ ನಗರದವರೆಗೂ ವಿಸ್ತರಿಸುವ ಅವಶ್ಯಕತೆ ಇದ್ದು ,ಈ ಬಗ್ಗೆ ಸಂಸದ ಸಂಗಣ್ಣ ಕರಡಿಯವರು ಕಾಳಜಿವಹಿಸಬೇಕೆಂದು ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕರೂ ಆಗಿರುವ ಅಶೋಕಸ್ವಾಮಿ ಹೇರೂರ ಆಗ್ರಹಿಸಿದ್ದಾರೆ.