ಗಂಗಾವತಿ: ಮುಂಬೈ-ಗದಗ ಮತ್ತು ಸೊಲ್ಲಾಪುರ-ಗದಗ ರೇಲ್ವೆಗಳ ಸಂಚಾರವನ್ನು ಗಂಗಾವತಿ ನಗರದವರೆಗೂ ವಿಸ್ತರಿಸುವಂತೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆವತಿಯಿಂದ ಕೇಂದ್ರ ಸರಕಾರಕ್ಕೆ ಮತ್ತು ಸಂಸದರಿಗೆ ವರ್ಷಾನುಗಟ್ಟಲೇ ಪತ್ರ ಬರೆದು,ಬೇಡಿಕೆ ಸಲ್ಲಿಸಲಾಗಿತ್ತು.
ಆದರೆ ಅವುಗಳನ್ನು ಹೊಸಪೇಟೆ ನಗರದವರೆಗೂ ವಿಸ್ತರಿಸಲಾಯಿತು ಎಂದು ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ಗೋವಾ-ಗಂಗಾವತಿ ರೇಲ್ವೆ ಬೇಡಿಕೆಯ ಬಗ್ಗೆಯೂ ಮನವಿ ಸಲ್ಲಿಸುತ್ತಾ ಬರಲಾಗುತ್ತಿದೆ.ನಮ್ಮ ಭಾಗದ ಬೇಡಿಕೆಯಾದ ಗೋವಾ-ಗಂಗಾವತಿ ರೇಲ್ವೆ ಕೂಡ ಬೇರೆ ಊರಿನ ಪಾಲಾದರೆ,ಸಹಿಸುವುದಿಲ್ಲ ಎಂದು ಕಿಷ್ಕಿಂದಾ ಹೋರಾಟ ಸಮಿತಿಯ ಸಹ ಸಂಚಾಲಕರೂ ಆಗಿರುವ ಹೇರೂರ ಎಚ್ಚರಿಸಿದ್ದಾರೆ.
ದೂರದ ಸಂಚಾರದ ರೇಲ್ವೆಗಳನ್ನು ಶುಚಿಗೊಳಿಸಲು, ಬೋಗಿಗಳಿಗೆ ತುಂಬಿಸಲು ಬೇಕಾದ ನೀರಿನ ವ್ಯವಸ್ಥೆಯನ್ನು ರೇಲ್ವೆ ಇಲಾಖೆ ಮಾಡಿಕೊಳ್ಳಬೇಕು. ಅದು ಬಿಟ್ಟು ವ್ಯವಸ್ಥೆ ಇಲ್ಲ ಎಂದು ನೆಪ ಹೇಳಿ,ಸೌಲಭ್ಯಗಳನ್ನು ನಿರಾಕರಿಸುವುದು ಸರಿಯಲ್ಲ ಎಂದವರು ತಮ್ಮ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಗಂಗಾವತಿ,ಕಾರಟಗಿಯಿಂದ ಭತ್ತ ಕಳುಹಿಸಿ, ಕೋಟ್ಯಾಂತರ ರೂಪಾಯಿಗಳ ಆದಾಯ ನೀಡಿದಾಗ ಹಿರಿ ಹಿರಿ ಹಿಗ್ಗಿದ್ದ ರೇಲ್ವೆ ಇಲಾಖೆಯ ಅಧಿಕಾರಿಗಳು, ಸೌಲಭ್ಯಗಳನ್ನು ಒದಗಿಸಲು ಹಿಂದೇಟು ಹಾಕುತ್ತಿರುವುದು ವಿಷಾಧಕರ ಎಂದು ಅಶೋಕಸ್ವಾಮಿ ಹೇರೂರ ಹೇಳಿದ್ದಾರೆ.
ಗೋವಾ-ಗಂಗಾವತಿ ರೇಲ್ವೆ ಆರಂಭಿಸಲು ಕ್ರಮ ಕೈಗೊಳ್ಳಲು ಸಂಸದ ಸಂಗಣ್ಣ ಕರಡಿಯವರಿಗೆ ಪುನಃ ಪತ್ರ ಬರೆಯಲಾಗಿದೆ.ಅವರ ಸರಕಾರಿ ಕಾರ್ಯದರ್ಶಿಯವರ ಜೊತೆಗೂ ಮಾತನಾಡಲಾಗಿದೆ ಎಂದು ಹೇರೂರ ಮಾಹಿತಿ ನೀಡಿದ್ದಾರೆ.